ಬೆಂಗಳೂರು: ಲಾಕ್ಡೌನ್ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಹೊಸ ಮ್ಯೂಟೆಂಟ್ ವೈರಸ್ ಬಗ್ಗೆ ಅರಿವು ಮೂಡಿಸೋಣ, ಭಯ ಹುಟ್ಟಿಸೋದು ಬೇಡ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.
ರೂಪಾಂತರಿ ಕೊರೊನಾ ವೈರಸ್ ಬಗ್ಗೆ ಮಾತನಾಡಿದ ಅವರು.. ನಾಳೆ ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಮಗ್ರವಾಗಿ ಸಭೆ ಮಾಡುತ್ತೇನೆ. ತಾಂತ್ರಿಕ ಸಲಹಾ ಸಮಿತಿ ಜೊತೆ ಸಿಎಂ ಮಾತನಾಡಿದ್ದಾರೆ. ಅವರನ್ನು ಕೂಡ ನಾಳೆ ಸಭೆಗೆ ಕರೆದಿದ್ದೇನೆ. ಅವರಿಂದ ಸಲಹೆ ಪಡೆಯುತ್ತೇನೆ. ಹೊಸ ತಳಿ ಹೇಗೆ ಕೆಲಸ ಮಾಡುತ್ತೆ ಎಂದು ಡಿಸೆಂಬರ್ 1 ರಂದು ತಿಳಿಯಲಿದೆ.
ಈಗ 12 ದೇಶಗಳಲ್ಲಿ ಈ ತಳಿ ಕಾಣಿಸಿಕೊಂಡಿದೆ. ದೇಶಕ್ಕೆ ಅಂತಾರಾಷ್ಟ್ರೀಯ ವಿಮಾನಗಳು ಬರುತ್ತಿವೆ. ಬಹಳ ಎಚ್ಚರಿಕೆಯಿಂದ ಪರೀಕ್ಷೆ ಮಾಡುತ್ತಿದ್ದೇವೆ. ಹಿಂದೆ ಬಂದವರನ್ನು ತಪಾಸಣೆ ಮಾಡಿದ್ದೇವೆ. ದಕ್ಷಿಣ ಆಫ್ರಿಕಾದ ವೈದರ ಜೊತೆ ಮಾತನಾಡಿದ್ದೇನೆ. ಬಹಳ ಬೇಗವಾಗಿ ಈ ವೈರಸ್ ಹರಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವಾಂತಿ, ಸುಸ್ತು ಈ ವೈರಸ್ನಲ್ಲಿದೆ. ಆಯಾಸ ಆಗುವ ಲಕ್ಷಣಗಳು ಇದರಲ್ಲಿ ಇಲ್ಲ. ಡೆಲ್ಟಾ ಹೊಲಿಕೆ ಮಾಡಿದ್ರೆ ವೇಗವಾಗಿ ಇದು ಹರಡಲ್ಲ. ಹಾಗಾಗಿ ನಾವೆಲ್ಲ ಎಚ್ಚರಿಕೆಯಿಂದ ಇರುವ ಸಲಹೆ ನೀಡುತ್ತೇನೆ. ಈಗಾಗಲೇ ಬಹಳಷ್ಟು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉದ್ಯೋಗ ಕಳೆದುಕೊಂಡಿದ್ದಾರೆ. ಹಾಗಾಗಿ ಜನರಿಗೆ ಮತ್ತಷ್ಟು ತೊಂದರೆ ಕೊಡುವುದು ಬೇಡ. ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಜನರಿಗೆ ಅರಿವು ಮೂಡಿಸೋಣ, ಭಯ ಬೀಳಿಸುವುದು ಬೇಡ ಎಂದು ಸುಧಾಕರ್ ಮನವಿ ಮಾಡಿಕೊಂಡಿದ್ದಾರೆ.