ವಿಟ್ಲ: ವಿಟ್ಲ ಪೊಲೀಸ್ ಠಾಣೆ ಮೇಲ್ದಾರ್ಜೆಗೇರಿದ ಬಳಿಕ ವಿಟ್ಲ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಕರ್ತವ್ಯ ಲೋಪ ಎಸಗುತ್ತಿದ್ದು, ಇತ್ತೀಚೆಗೆ ಠಾಣಾ ವ್ಯಾಪ್ತಿಯಲ್ಲಿ ನಡೆದ ಮೂರು ಅಪರಾಧ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಆರೋಪಿಸಿದ್ದಾರೆ.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು ವಿಟ್ಲ ದೇವಸ್ಥಾನ ರಸ್ತೆಯ ನಿವಾಸಿ ನಿಶ್ಮಿತಾ ಅವರು ಮಾನಸಿಕವಾಗಿ ಮನನೊಂದು ಡೆತ್ ನೋಟು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಆಕೆಯ ಹೆತ್ತವರು ಡೆತ್ ನೋಟಿನಲ್ಲಿ ಯುವತಿ ಉಲ್ಲೇಖಿಸಿದ ಮೂವರು ವಿರುದ್ಧ ಕ್ರಮ ಜರುಗಿಸಬೇಕೆಂದು ದೂರು ನೀಡಿದ್ದರೂ ೫೦ ದಿನಗಳ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಇದುವರೆಗೂ ತನಿಖೆ ಕೈಗೊಂಡಿಲ್ಲ. ಬಡಕುಟುಂಬದ ಹೆಣ್ಮಗಳು ಪ್ರಾಣ ಕಳೆದುಕೊಂಡರೂ ಅವಳಿಗೆ ನ್ಯಾಯ ಒದಗಿಸಿಕೊಡದ ಇಂತಹ ಪೊಲೀಸ್ ಠಾಣೆ ಜನರಿಗೆ ಅಗತ್ಯವಿದೀಯಾ? ಎಂದು ಪ್ರಶ್ನಿಸಿದರು.
ಬಡ ಕುಟುಂಬದ ನಿಶ್ಮಿತಾ ಅವರು ಡೆಂಟಲ್ ಕ್ಲಿನಿಕ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ತಾಯಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದರು. ಅವರಿಗೆ ನ್ಯಾಯ ನೀಡದ ವಿಟ್ಲ ಪೊಲೀಸರು ಕೆಲವು ರಾಜಕೀಯ ಒತ್ತಡದಿಂದ ಕ್ರಮಕೈಗೊಳ್ಳುತ್ತಿಲ್ಲ. ವಿಟ್ಲ ನಿವಾಸಿಗಳಾದ ಪ್ರಶಾಂತ್, ದಿನೇಶ್, ಯಶವಂತ, ಕೇಪು ನಿವಾಸಿ ರಕ್ಷಿತ್ ಮೇಲೆ ಪ್ರಕರಣ ದಾಖಲಾಗಿದೆ. ರಕ್ಷಿತ್ ಉದ್ದೇಶಪೂರ್ವಕವಾಗಿ ಯುವತಿಯಲ್ಲಿ ಮಾತನಾಡಿದ್ದನ್ನು ಪ್ರಶಾಂತ್ ಸಹೋದರ ದಿನೇಶ್ ಹಾಗೂ ಯಶವಂತ ಅವರು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಪ್ರೀತಿ ಮಾಡುತ್ತಿದ್ದ ಪ್ರಶಾಂತ್‌ಗೆ ಕಳುಹಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣ ಗೊತ್ತಿದ್ದರೂ ಪ್ರಕರಣ ದಾಖಲಿಸಿದ ಬಳಿಕವೂ ಆರೋಪಿಗಳನ್ನು ಠಾಣೆಗೆ ಕರೆದು ವಿಚಾರಣೆ ನಡೆಸಿಲ್ಲ. ಹೀಗಾದರೆ ಠಾಣೆ ಮೇಲ್ದರ್ಜೆಗೇರಿ ಪ್ರಯೋಜನವೇನು ? ತನಿಖೆ ಬೇಡ, ನಿರ್ಲಕ್ಷ್ಯ ಮಾಡಿ ಎಂಬ ಒತ್ತಡ ಬಂದಿದೆಯೇ ? ಈ ಬಗ್ಗೆ ಮೇಲಧಿಕಾರಿಗಳ ಜತೆ ಮಾತನಾಡಿದ ಬಳಿಕವೂ ಯಾವುದೇ ಪ್ರಯೋಜನವಾಗಲಿಲ್ಲ. ಪತ್ರಿಕೆ, ಮಾಧ್ಯಮಗಳ ಮೂಲಕ ಈ ಪ್ರಕರಣದ ನೈಜ ಮಾಹಿತಿಯನ್ನು ಸಮಾಜಕ್ಕೆ ತಿಳಿಸಬಯಸುತ್ತೇನೆ. ಈ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಅವರು ಆಗ್ರಹಿಸಿದರು.
ಅದಲ್ಲದೇ ಸೂರಿಕುಮೇರು ಕಾರು ಅಪಘಾತದ ಬಳಿಕ ನಡೆದ ಗಲಾಟೆಯಲ್ಲಿ ನಿರಪರಾಧಿಗಳನ್ನು ವಿಟ್ಲ ಠಾಣೆಗೆ ಕರೆ ತರಲಾಗಿದೆ. ಅವರಿಬ್ಬರೂ ಪೊಲೀಸ್ ಠಾಣೆಯಲ್ಲಿ ನಮ್ಮಿಬ್ಬರನ್ನು ಇವರು ಕರೆದುಕೊಂಡು ಬಂದ ಉದ್ದೇಶವೇನು ಎಂದು ಮಾತನಾಡಿಕೊಂಡಿದ್ದರು. ಆದರೆ ಅಲ್ಲಿ ಚೂರಿ ಹಿಡಿದು ಓಡಾಡುತ್ತಿದ್ದ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ಆರೋಪಿಯನ್ನು ಪೊಲೀಸರು ಕರೆತರಲಿಲ್ಲ. ಅಪಘಾತಕ್ಕೆ ಕೋಮು ಬಣ್ಣ ಬಳಿಯುವುದು ಯಾಕೆ ? ಎಂದು ವ್ಯಂಗ್ಯವಾಡಿದ ಅವರು ಮತ್ತೊಂದು ಪ್ರಕರಣದಲ್ಲಿ ಧ್ವಜವನ್ನು ಅಳವಡಿಸುವ ವಿಚಾರದಲ್ಲಿ ಸಂಬಂಧಪಡದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದೆಲ್ಲ ಅನ್ಯಾಯ. ಈ ಎಲ್ಲಾ ಘಟನೆಗಳನ್ನು ನಾನು ಖಂಡಿಸುತ್ತೇನೆ ಮತ್ತು ಸೂಕ್ತ ತನಿಖೆ ನಡೆಸಿ ಬಡ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡುವ ಜವಾಬ್ದಾರಿ ಪೊಲೀಸರಿಗಿದೆ ಎಂದು ಉಲ್ಲೇಖಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ.ಮಾಜಿ ಸದಸ್ಯ ಎಂ.ಎಸ್.ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಮಾಜಿ ಅಧ್ಯಕ್ಷ ಪ್ರವೀಣಚಂದ್ರ ಆಳ್ವ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ, ನಗರ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್, ನಿಶ್ಮಿತಾ ಅವರ ತಾಯಿ ಉಮಾವತಿ, ಮತ್ತಿತರರು ಉಪಸ್ಥಿತರಿದ್ದರು.