ಬೆಂಗಳೂರು: ಕೊರೋನಾ ರೂಪಾಂತರಿ ವೈರಸ್ ರಾಜ್ಯಕ್ಕೆ ಕಾಲಿಟ್ಟ ಬೆನ್ನಲ್ಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆದಿದ್ದು, ರಾಜ್ಯಾದ್ಯಾಂತ ಟಫ್ ರೂಲ್ಸ್ ಜಾರಿ ಮಾಡಿದ್ದಾರೆ. ಈ ಬಗ್ಗೆ ಕಂದಾಯ ಸಚಿವ ಆರ್.ಅಶೋಕ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಸದ್ಯ ಅಧಿಕೃತವಾಗಿ ರಾಜ್ಯದಲ್ಲಿ 2 ಓಮಿಕ್ರಾನ್ ಸೋಂಕು ಪ್ರಕರಣ ಪತ್ತೆಯಾಗಿದೆ. ಅಂತರರಾಷ್ಟ್ರೀಯ ಪ್ರಯಾಣಿಕರು ರಾಜ್ಯದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಕಡ್ಡಾಯ ಕೊರೋನಾ ಪರೀಕ್ಷೆ ನಡೆಸಬೇಕು. ಅದರ ವರದಿ ಬಂದ ನಂತರವೇ ಮನೆಗೆ ತೆರಳಲು ಅವಕಾಶ ಇದೆ. ಇಲ್ಲದಿದ್ದರೆ ಕ್ವಾರಂಟೈನ್ ನಡೆಸಲಾಗುವುದು.
ವಿಮಾನ ನಿಲ್ದಾಣದಲ್ಲಿ ಕೊರೋನಾ ಪರೀಕ್ಷೆಗೆ ರಾಜ್ಯ ಸರ್ಕಾರ ದರ ಪ್ರಕಟಿಸಿದ್ದು, ತ್ವರಿತ ರಿಪೋರ್ಟ್ ಕೊಡಲು 3000 ಸಾವಿರ ರೂಪಾಯಿ, ನಾರ್ಮಲ್ ರಿಪೋರ್ಟ್ ಕೊಡಲು 500 ರೂಪಾಯಿ ಶುಲ್ಕ ವಿಧಿಸಲಾಗಿದೆ.
ಇನ್ಮುಂದೆ ಸಿನಿಮಾ ಥಿಯೇಟರ್, ಮಾಲ್‌ನಲ್ಲಿ ಎರಡು ಡೋಸ್ ಪಡೆಯದ ಹೊರತು ಪ್ರವೇಶವಿಲ್ಲ. ಶಾಲೆಗೆ ತೆರಳುವ ಮಕ್ಕಳ ಹೆತ್ತವರಿಗೆ ಎರಡು ಡೋಸ್ ಕಡ್ಡಾಯ. ಇಲ್ಲದಿದ್ದರೆ ಅಂತವರ ಮಕ್ಕಳು ಶಾಲೆಗೆ ತೆರಳುವಂತಿಲ್ಲ.
ಜೊತೆಗೆ ಶಾಲಾ-ಕಾಲೇಜಿನಲ್ಲಿ ಸಭೆ ಸಮಾರಂಭ ನಡೆಸುವಂತಿಲ್ಲ. 500 ಜನರ ಮಿತಿಯೊಳಗೆ ಮದುವೆ ಸಮಾರಂಭಕ್ಕೆ ಅವಕಾಶ. ಪ್ರತಿದಿನ 1 ಲಕ್ಷ ಟೆಸ್ಟ್ ನಡೆಸಲು ಆರೋಗ್ಯ ಇಲಾಖೆಗೆ ಸೂಚನೆ.
ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಪ್ಲಾಂಟ್, ಬೆಡ್, ವೆಂಟಿಲೇಟರ್ ಸೇರಿದಂತೆ ವೈದ್ಯಕೀಯ ಉಪಕರಣ ಮತ್ತೆ ಸಜ್ಜುಗೊಳಿಸಲು ನಿರ್ಧಾರ. ರಾಜ್ಯದಲ್ಲಿ ಕೊರೋನಾ ಕಂಟ್ರೋಲ್ ರೂಂ ಮತ್ತೆ ಪ್ರಾರಂಭ.