ಹೈದರಾಬಾದ್: ಕ್ಷುಲ್ಲಕ ಕಾರಣಕ್ಕೆ 36 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಜಗಳವಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಪತ್ನಿ ತನ್ನ ಇಚ್ಛೆಯಂತೆ ರವಿಕೆಯನ್ನು ಹೊಲಿದಿಲ್ಲ ಎಂಬ ಕಾರಣಕ್ಕೆ ಗಂಡನ ಮೇಲೆ ಕೋಪಗೊಂಡಿದ್ದ ಮಹಿಳೆ ನಂತರ ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿಜಯಲಕ್ಷ್ಮಿ(Vijayalakshmi) ಎಂದು ಗುರುತಿಸಲಾಗಿದೆ. ಹೈದರಾಬಾದ್‌ನ ತಿರುಮಲ ನಗರ (Thirumala Nagar) ನಿವಾಸಿಯಾಗಿರುವ ಈಕೆ ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ವಾಸ ಮಾಡುತ್ತಿದ್ದರು. ಈಕೆಯ ಪತಿ ಟೈಲರಿಂಗ್ ವೃತ್ತಿಯನ್ನು ಮಾಡುತ್ತಿದ್ದು, ಸೀರೆ ಹಾಗೂ ರವಿಕೆಗಳನ್ನು ಹೊಲಿದು ಮಾರಾಟ ಮಾಡಿ ಅದರಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದರು.
ಪತ್ನಿ ವಿಜಯಲಕ್ಷ್ಮಿಯ ರವಿಕೆಯೊಂದನ್ನು ಗಂಡ ಹೊಲಿದಿದ್ದು, ಇದು ವಿಜಯಲಕ್ಷ್ಮಿಗೆ ಇಷ್ಟವಾಗಿಲ್ಲ. ಹೀಗಾಗಿ ಆಕೆ ಅದನ್ನು ಮತ್ತೆ ಹೊಲಿಗೆ ಬಿಚ್ಚಿ ಮರು ಹೊಲಿಗೆ ಹಾಕುವಂತೆ ಮನವಿ ಮಾಡಿದ್ದಾಳೆ. ಆದರೆ ಟೈಲರ್ ಗಂಡ ಈಕೆಯ ಮನವಿಯನ್ನು ತಿರಸ್ಕರಿಸಿದ್ದು, ಮತ್ತೆ ಪತ್ನಿಯ ಇಷ್ಟದಂತೆ ಸ್ಟಿಚ್ ಹಾಕುವ ಬದಲು ಹಾಕಿದ ಸ್ಟಿಚ್‌ಗಳನ್ನೆಲ್ಲ ಬಿಚ್ಚಿ ಆಕೆಯತ್ತ ಬಿಸಾಕಿದ್ದಾನೆ. ಇದರಿಂದ ತೀವ್ರವಾಗಿ ನೊಂದ ಆಕೆ ಬೆಡ್‌ರೂಮ್‌ಗೆ ತೆರಳಿ ರೂಮ್‌ಗೆ ಒಳಗಿನಿಂದ ಚಿಲಕ ಹಾಕಿಕೊಂಡು ನೇಣಿಗೆ ಶರಣಾಗಿದ್ದಾಳೆ.
ವಿಜಯಲಕ್ಷ್ಮಿಯ ಮಕ್ಕಳು ಈ ವೇಳೆ ಶಾಲೆಗೆ ತೆರಳಿದ್ದು, ಮರಳಿ ಬಂದು ಅಮ್ಮನಿಗಾಗಿ ಹುಡುಕಾಟ ನಡೆಸಿದಾಗ ಆಕೆ ಎಲ್ಲೂ ಕಾಣಿಸಿಲ್ಲ. ನಂತರ ಬೆಡ್‌ರೂಮ್ ಲಾಕ್ ಆಗಿದ್ದನ್ನು ಕಂಡ ಮಕ್ಕಳು ಹಲವು ಬಾರಿ ಬಾಗಿಲನ್ನು ಬೊಟ್ಟಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಳಿಕ ತಂದೆಗೆ ಮಕ್ಕಳು ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಮಹಿಳೆಯ ಪತಿ ಶ್ರೀನಿವಾಸ್ ಹಲವು ಬಾರಿ ಬಾಗಿಲನ್ನು ಬಡಿದು ತೆಗೆಯದಿದ್ದಾಗ ಬಾಗಿಲು ಮುರಿದು ಒಳ ಹೋಗಿದ್ದಾರೆ. ಈ ವೇಳೆ ಪತ್ನಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ.