ಪುತ್ತೂರು: ದ.ಕ ಜಿಲ್ಲಾ `ಬಿಜೆಪಿಯ ಭೀಷ್ಮ’ ಎಂದೇ ಕರೆಸಿಕೊಳ್ಳುತ್ತಿದ್ದ ಪುತ್ತೂರಿನ ಮಾಜಿ ಶಾಸಕ ಉರಿಮಜಲು ಕೆ. ರಾಮ ಭಟ್ (92) ರವರು ವಯೋ ಸಹಜ ಅನಾರೋಗ್ಯದಿಂದಾಗಿ ಡಿ.6 ರಂದು ಸಂಜೆ ನಿಧನರಾದರು.
ವಯೋ ಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚೇತರಿಸಿಕೊಂಡಿದ್ದ ರಾಮ ಭಟ್ ರವರನ್ನು ಕೊಂಬೆಟ್ಟಿನಲ್ಲಿರುವ ಅವರ ಮನೆಗೆ ಕರೆ ತರಲಾಗಿತ್ತು. ಮತ್ತೆ ಆರೋಗ್ಯ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು . ಆದರೆ ಇಂದು ಸಂಜೆ ಮನೆಯಲ್ಲಿಯೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಜನಸಂಘದ ಪ್ರಭಾವಿ ನಾಯಕರಾಗಿ, ವಕೀಲರಾಗಿ, ಪುತ್ತೂರು ಪುರಸಭೆಯ ಅಧ್ಯಕ್ಷರಾಗಿ, ಕ್ಯಾಂಪ್ಕೋದ ಅಧ್ಯಕ್ಷರಾಗಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ, ಪುತ್ತೂರಿನ ಶಾಸಕರಾಗಿ, ಭಾರತೀಯ ಜನತಾ ಪಾರ್ಟಿಯ ಮುಂಚೂಣಿಯ ಮುಖಂಡರಾಗಿ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತೊಡಗಿಸುಕೊಳ್ಳುವ ಮೂಲಕ ಜನಾನುರಾಗಿಯಾಗಿದ್ದರು .
7 ಬಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅವರು 1977 ಹಾಗೂ 1983 ರಲ್ಲಿ ಗೆದ್ದು ಶಾಸಕರಾಗಿದ್ದರು . 1957 ರಲ್ಲಿ ಮೊದಲ ಬಾರಿ ಜನ ಸಂಘದ ಅಡಿಯಲ್ಲಿ ಚುನಾವಣೆ ಸ್ಪರ್ಧಿಸಿದ್ದರೆ 1985 ರಲ್ಲಿ ಕೊನೆಯ ಬಾರಿ ಬಿಜೆಪಿ ಚಿಹ್ನೆಯಡಿ ಸ್ಪರ್ದಿಸಿದ್ದರು.