ಬಂಟ್ವಾಳ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ, ಬಸ್ ಇಳಿದು ಮನೆಯ ಕಡೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಡಿಕ್ಕಿ ಹೊಡೆದು ಹೆದ್ದಾರಿ ಬದಿಯಿಂದ ಕಂದಕಕ್ಕೆ ಉರುಳಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಪಾಣೆಮಂಗಳೂರಿನಲ್ಲಿ ನಡೆದಿದೆ.
ಅಪಘಾತದಿಂದಾಗಿ ವಿದ್ಯಾರ್ಥಿಗಳಿಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸಜೀಪ ಕಾಲೇಜಿನ ವಿದ್ಯಾರ್ಥಿಗಳಾದ ಮಹಮ್ಮದ್ ಸಲೀಂ ಹಾಗೂ ಸಿಂಚನ ಎನ್ನಲಾಗಿದೆ.
ಈ ಘಟನೆಯಿಂದ ವಿದ್ಯಾರ್ಥಿ ಮಹಮ್ಮದ್ ಸಲೀಂ ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಂಚನ ಎಂಬ ವಿದ್ಯಾರ್ಥಿನಿಗೂ ಗಾಯವಾಗಿದ್ದು ಅವಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪ್ರಪಾತಕ್ಕೆ ಉರುಳಿದ ಕಾರನ್ನು ಕ್ರೇನ್ ಬಳಸಿ ಮೇಲಕ್ಕೆತ್ತಲಾಗಿದ್ದು, ಕಾರು ಸಂಪೂರ್ಣ ಜಖಂಗೊಂಡಿದೆಯಾದರೂ ಕಾರಿನಲ್ಲಿದ್ದ ಚಾಲಕ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.