ಉಪ್ಪಿನಂಗಡಿ: ಇಳಂತಿಲ ಗ್ರಾಮದ ಅಂಡೆತ್ತಡ್ಕ ಹಾಗೂ ಉಪ್ಪಿನಂಗಡಿ ಗ್ರಾಮದ ಹಳೆಗೇಟ್ ಕ್ರಾಸ್ ಬಳಿ ನಡೆದ ತಲವಾರು ದಾಳಿ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ. ತೀವ್ರಗತಿಯಲ್ಲಿ ತನಿಖೆ ನಡೆಯುತ್ತಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಿದ್ದೇವೆ ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಷ್ ಸೋನಾವಣೆ ತಿಳಿಸಿದರು.
ಎರಡು ಅಹಿತಕರ ಘಟನೆಗಳ ಬಳಿಕ ಉಪ್ಪಿನಂಗಡಿಯಲ್ಲಿರುವ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ‘ಅಂಡೆತ್ತಡ್ಕದಲ್ಲಿ ಭಾನುವಾರ ನಡೆದ ತಲವಾರ್ ದಾಳಿಯ ಆರೋಪಿಗಳನ್ನು ದೂರುದಾರರು ಕೊಟ್ಟಿದ್ದಾರೆ. ಸೋಮವಾರ ಹಳೆಗೇಟ್ ಕ್ರಾಸ್ ಬಳಿ ನಡೆದ ತಲವಾರ್ ದಾಳಿಗೆ ಸಂಬಂಧಿಸಿ ಆರೋಪಿಗಳ ಹೆಸರುಗಳನ್ನು ದೂರುದಾರರು ನೀಡಿಲ್ಲ. ಆದುದರಿಂದ ಈ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.
ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿ ತನಿಖೆಗೆ ವಿಶೇಷ ತಂಡಗಳನ್ನು ರಚಿಸಿದ್ದು, ಅದರಲ್ಲಿ ದ.ಕ. ಜಿಲ್ಲೆ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ವಿಶೇಷವಾಗಿ ಅಪರಾಧ ಪ್ರಕರಣಗಳ ಪತ್ತೆ ಕಾರ್ಯದಲ್ಲಿ ನುರಿತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿದೆ. ಪೊಲೀಸ್ ಇಲಾಖೆ ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ, ವಿವಿಧ ಆಯಾಮದಲ್ಲಿ ತನಿಖೆ ನಡೆಸಿ, ನೈಜ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದರು.
ಪೊಲೀಸರು ಯಾರೂ ಅಂಗಡಿಗಳನ್ನು ಮುಚ್ಚಿಸಿಲ್ಲ. ಕೆಲವರು ಭಯಪಟ್ಟು ಸ್ವಯಂ ಪ್ರೇರಣೆಯಿಂದ ಈ ರೀತಿ ಮಾಡಿರಬಹುದು. ನಾಗರಿಕ ಸಮಾಜದಲ್ಲಿ ಯಾವುದೇ ರೀತಿಯ ಭಯ ಬೇಡ. ಪೊಲೀಸರ ಮೇಲೆ ಭರವಸೆ ಇರಲಿ. ವರ್ತಕರೂ ನಿರ್ಭೀತಿಯಿಂದ ವ್ಯಾಪಾರ ನಡೆಸಲಿ. ಈ ಭಾಗದಲ್ಲಿ 24 ಗಂಟೆಯೂ ಪೊಲೀಸ್ ಬಂದೋಬಸ್ತ್ ಹಾಕಲಾಗಿದ್ದು, ನಾಗರಿಕರು ಭಯಪಡುವ ಅಗತ್ಯವಿಲ್ಲ, ಅಹಿತಕರ ಘಟನೆ ನಡೆಯದಂತೆ ಹಾಗೂ ಅಹಿತಕರ ಘಟನೆಗೆ ಕಾರಣರಾದ ಆರೋಪಿಗಳನ್ನು ಶೀಘ್ರವಾಗಿ ಬಂಧಿಸುತ್ತೇವೆ ಎಂದರು.
ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ನಾಕಾಬಂದಿ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಪೊಲೀಸ್ ಗಸ್ತು ವ್ಯವಸ್ಥೆಯನ್ನೂ ಬಿಗುಗೊಳಿಸಲಾಗಿದೆ ಎಂದರು.