ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ 13 ದೈವ- ದೇವಸ್ಥಾನ ಲೂಟಿ ಮಾಡಿದ ಇಬ್ಬರು ಅಂತರ್ ಜಿಲ್ಲಾ ಖದೀಮರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ತರಿಕೆರೆಯ ಬೈರಪುರ ನಿವಾಸಿ ನಾಗ ನಾಯ್ಕ(55) ಹಾಗೂ ದಾವಣಗೆರೆ ಚೆನ್ನಗಿರಿ ಕಣದ ಸಾಲು ಬೀದಿಯ ಮಾರುತಿ ಸಿ.ವಿ.(33) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳಿಂದ ಒಟ್ಟು 28 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸರ ಮಾಹಿತಿಯಂತೆ ಈವರೆಗೆ ನಡೆದ 13 ದೈವಸ್ಥಾನ, ದೇವಸ್ಥಾನಗಳಲ್ಲಿ ಕಳವು ಹಾಗೂ 3 ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಈ ಇಬ್ಬರು ಆರೋಪಿಗಳು ಭಾಗಿಯಾಗಿದ್ದರು. ಆರೋಪಿ ನಾಗ ನಾಯ್ಕ ಎಂಬಾತನ ವಿರುದ್ಧ ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಅಜಂಪುರ, ಕಡೂರು ಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯ ತುಂಗಾನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಈತನು ತನ್ನ ಊರಾದ ತರೀಕೆರೆಯಿಂದ ಬಸ್ಸಿನಲ್ಲಿ ಮಂಗಳೂರಿಗೆ ಬಂದು ಮಂಗಳೂರು ನಗರದ ಬಸ್ ಸ್ಟಾಂಡ್, ಮೈದಾನಗಳಲ್ಲಿ ವಾಸವಿದ್ದು, ಹಗಲು ವೇಳೆಯಲ್ಲಿ ಒಂಟಿ ಮನೆಗಳನ್ನು, ದೇವಸ್ಥಾನ, ದೈವಸ್ಥಾನಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿ ನಂತರ ತನ್ನ ಊರಿಗೆ ಹೋಗಿ ಇನ್ನೋರ್ವ ಆರೋಪಿಯಾದ ಮಾರುತಿಯ ಚೆನ್ನಗಿರಿಯ ಜ್ಯುವೆಲ್ಲರಿಗೆ ಕಳ್ಳತನ ಮಾಡಿದ ಚಿನ್ನ ಹಾಗೂ ಬೆಳ್ಳಿಯನ್ನು ಮಾರಾಟ ಮಾಡುತ್ತಿದ್ದ.
ಆರೋಪಿ ಮಾರುತಿಯು ಈ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದವನು ಆರೋಪಿ ನಾಗನಾಯ್ಕ ಜೊತೆ ಸೇರಿಕೊಂಡು ಸ್ವಂತ ಜ್ಯುವೆಲ್ಲರಿ ಅಂಗಡಿಯನ್ನು ತೊಡಗಿಸಿ ಆರೋಪಿ ಜೊತೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಮಾರುತಿಯು ತನ್ನ ಜ್ಯುವೆಲ್ಲರಿಯಲ್ಲಿ ಕಳ್ಳತನದ ಸಾಮಾಗ್ರಿಗಳನ್ನು ಇರಿಸಿಕೊಂಡು ದಾವಣಗೆರೆಯ ಜ್ಯುವೆಲ್ಲರಿಗೆ ಮಾರಾಟ ಮಾಡುತ್ತಿದ್ದ ಎಂದು ಮಂಗಳೂರು ಪೊಲೀಸ್ ಆಯುಕ್ತರಾದ ಎನ್ ಶಶಿ ಕುಮಾರ್ ಮಾಹಿತಿ ನೀಡಿದ್ದಾರೆ.