ವಿಟ್ಲ: ಇದೇ ತಿಂಗಳ 27ರಂದು ನಡೆಯಲಿರುವ ವಿಟ್ಲ ಪಟ್ಟಣ ಪಂಚಾಯತು ಚುನಾವಣೆಗೆ ಈಗಾಗಲೇ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಬಿರುಸಿನಿಂದ ನಡೆಯುತ್ತಿದೆ. ಈ ಮಧ್ಯೆ ವಿಟ್ಲದಲ್ಲಿ ಜೆಡಿಎಸ್ ಮತ್ತು ಎಸ್ಡಿಪಿಐ ಪಕ್ಷಗಳ ಕಾರುಬಾರು ಅಷ್ಟೇನೂ ನಡೆಯುತ್ತಿಲ್ಲ. ಇದರಿಂದಾಗಿ 18ಕ್ಷೇತ್ರಗಳಲ್ಲೂ ನೇರ ಹಣಾಹಣಿ ನಡೆಯಲಿರುವ ಸ್ಪಷ್ಟ ಸೂಚನೆ ಎದ್ದುಕಾಣುತ್ತಿದೆ. ಗ್ರಾಮ ಪಂಚಾಯತು ಪಟ್ಟಣ ಪಂಚಾಯತಾಗಿ ಮೇಲ್ದರ್ಜೆಗೇರಿದ್ದ ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ಪಟ್ಟಣ ಪಂಚಾಯತಿನ ಅಧಿಕಾರದ ಚುಕ್ಕಾಣಿ ಮತದಾರರ ಆಶೀರ್ವಾದದಿಂದಾಗಿ ಕಮಲ ಪಾಳಯಕ್ಕೆ ದಕ್ಕಿತ್ತು. ಆದರೆ ಈ ಬಾರಿ ಉಲ್ಟಾ ಆಗಲಿದೆಯೋ ಎಂಬ ಸಂಶಯ ಕಾಡತೊಡಗಿದೆ.ಈಗಾಗಲೇ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಅಂತೆಕಂತೆಗಳು ಕೇಳಲಾರಂಭಿಸಿದೆ.
ಅದಕ್ಕೆ ಕಾರಣವೂ ಬೇರಾರೂ ಅಲ್ಲ. ಪಕ್ಷದ ಅಭಿವೃದ್ಧಿಗಾಗಿ ಹುಟ್ಟಿಕೊಂಡ ಕಮಲ ಪಕ್ಷದ ಕೆಲ ಮುಖಂಡರ ಡಬ್ಬಲ್ ಗೇಮ್ ಲೆಕ್ಕಾಚಾರವೇ ಉಲ್ಟಾ ಹೊಡೆಯಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಧಿಕಾರದ ಆಸೆಯಿಂದ ಕೆಲ ಮುಖಂಡರು ಪಕ್ಷದ ನಾಯಕರ ಕಿವಿಗೆ ಹೂವಿಟ್ಟು 18 ಕ್ಷೇತ್ರಗಳ ಪೈಕಿ 14ರಲ್ಲಿಯೂ ಭಾರೀ ಮೀಸಲಾತಿ ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
ಹಿರಿಯರನ್ನು ಕಡೆಗಣಿಸಿ ಹೊಸಬರಿಗೆ ಈ ಬಾರಿ ಮಣೆ ಹಾಕುವ ಮೂಲಕ ಮತ್ತೆ ಅವರ ಅಧಿಕಾರದ ಕನಸು ಕಾಣುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಆದರೆ ಇವರ ಮಾತು ನಂಬಿ ಹೊಸಬರಿಗೆ ಮಣೆಹಾಕಿದರೆ ಈ ಬಾರಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರು, ಮತ್ತು ಮತದಾರರು ಇವರ ಹಾಗೂ ಪಕ್ಷದ ನಿರ್ಧಾರಕ್ಕೆ ಸರಿಯಾದ ಚಿಕಿತ್ಸೆ ನೀಡಲಿದ್ದಾರೆಂಬ ಮಾತುಗಳು ಮತದಾರರಿಂದ ವ್ಯಕ್ತವಾಗಿದೆ.
ಇನ್ನಾದರೂ ಪಕ್ಷದ ಉಳಿವಿಗಾಗಿ, ಅಭಿವೃದ್ಧಿಗಾಗಿ ಹಿರಿಯ ನಾಯಕರು ಎಚ್ಚೆತ್ತುಕೊಳ್ಳುವ ಮೂಲಕ ಶಕ್ತಿ ಕೇಂದ್ರದ ಕಾರ್ಯಕರ್ತರ ಶಕ್ತಿ ಕುಂದದಂತೆ ಗಮನಹರಿಸಬೇಕೆಂಬುದು ನಿಷ್ಟಾವಂತ ಸೇವಕರ ಒಕ್ಕೊರಲ ಆಗ್ರಹವಾಗಿದೆ.