ನವದೆಹಲಿ: ಹ್ಯಾಕರ್ಗಳು ಸೆಲಬ್ರಿಟಿ ಟ್ವಿಟರ್ ಖಾತೆಗಳ ಮೇಲೆ ಹೆಚ್ಚು ಫೋಕಸ್ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ವಿಶ್ವದ ಟಾಪ್ ಟೆಕ್ ದಿಗ್ಗಜರ, ಬಿಲಿಯನೇರ್ಗಳ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿ ಹ್ಯಾಕರ್ಸ್ ಶಾಕ್ ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಅವರ ಟ್ವಿಟರ್ ಖಾತೆಯನ್ನು ಭಾನುವಾರ ಮುಂಜಾನೆ 2 ಗಂಟೆ ಸಮಯದಲ್ಲಿ ಹ್ಯಾಕರ್ಗಳು ಹ್ಯಾಕ್ ಮಾಡಿದ್ದು, ಈ ವಿಚಾರವನ್ನು ಪಿಎಂಒ ತನ್ನ ಟ್ವಿಟರ್ ಖಾತೆಯಲ್ಲಿ 3 ಗಂಟೆ ವೇಳೆಗೆ ಟ್ವೀಟ್ ಮಾಡಿ ಖಚಿತ ಪಡಿಸಿದೆ. ಹ್ಯಾಕ್ ಆಗಿರೋ ವಿಚಾರದ ಬಗ್ಗೆ ಟ್ವಿಟರ್ಗೆ ಮಾಹಿತಿ ನೀಡಿದ್ದು, ಸದ್ಯ ಪ್ರಧಾನಿಗಳ ಖಾತೆಯನ್ನು ಭದ್ರಪಡಿಸಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಅಂದಹಾಗೇ, ಮೋದಿ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿರೋ ಹ್ಯಾಕರ್, ಕ್ರಿಪ್ಟೋ ಕರೆನ್ಸಿ ಕುರಿತು ಟ್ವೀಟ್ ಮಾಡಿದ್ದರು. ಬಿಟ್ ಕಾಯಿನ್ಅನ್ನು ಸರ್ಕಾರ ಅಧಿಕೃತವಾಗಿ ಅನುಮೋದಿಸಿದೆ. ಬಿಟ್ ಕಾಯಿನ್ ಟೆಂಡರ್ಗಳನ್ನು ಸರ್ಕಾರ ಕರೆದಿದೆ. ಸರ್ಕಾರ 500 ಬಿಟಿಸಿಗಳನ್ನು ಖರೀದಿ ಮಾಡಿದೆ. ದೇಶದಲ್ಲಿರೋ ಜನರಿಗೆ ಸರ್ಕಾರ ಹಂಚಿಕೆ ಮಾಡಲಿದೆ ಎಂದು ಹ್ಯಾಕರ್ಗಳು ಪೋಸ್ಟ್ ಮಾಡಿದ್ದರು. ಸದ್ಯ ಈ ಪೋಸ್ಟ್ಅನ್ನು ಡಿಲೀಟ್ ಮಾಡಲಾಗಿದೆ. ಟ್ವಿಟರ್ ಖಾತೆ ಹ್ಯಾಕ್ ಆದ ಸಂದರ್ಭದಲ್ಲಿ ಪೋಸ್ಟ್ ಮಾಡಲಾಗಿರೋ ಸಂದೇಶವನ್ನು ಪರಿಗಣನೆಗೆ ತೆಗೆದುಕೊಳ್ಳಬೇಡಿ ಎಂದು ಪಿಎಂಒ ಖಾತೆ ತಿಳಿಸಿದೆ.