ಪುತ್ತೂರು: ಯುವಜನತೆ ಸದಾ ಸಮಾಜಮುಖಿ ಚಿಂತನೆಯಲ್ಲಿ ತೊಡಗಿಕೊಳ್ಳಬೇಕು. ನಮ್ಮ ನಾಡು ಗುರುವಿಗೆ ದೇವರ ಸ್ಥಾನವನ್ನು ಕಲ್ಪಿಸಿದೆ. ಗುರುವಿಗೆ ಗೌರವವನ್ನಿತ್ತು ಕಾಲೇಜಿನ ಸಮಗ್ರತೆಗೆ ದುಡಿಯಬೇಕು. ವಿದ್ಯಾರ್ಥಿಗಳು ದೇಶದ ಬಗ್ಗೆ, ಹಿರಿಯರ ಬಗ್ಗೆ ಗೌರವವನ್ನು ಇಟ್ಟುಕೊಳ್ಳಬೇಕು. ಭವಿಷ್ಯದ ಉತ್ತಮ ನಾಯಕರಾಗಿ ಬೆಳೆದಾಗ ಮಾತ್ರ ನಮ್ಮ ದೇಶವು ಅಭಿವೃದ್ಧಿಯಾಗಲು ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಸಮೂಹ ಉದಾತ್ತ ಧ್ಯೇಯಗಳನ್ನು ರೂಪಿಸಿಕೊಂಡು ಬೆಳೆಯಬೇಕು ಎಂದು ಬೆಂಗಳೂರಿನ ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರು ಮಠದ ಪೀಠಾಧಿಪತಿಗಳಾದ ಶ್ರೀ ವಿಖ್ಯಾತನಂದ ಸ್ವಾಮೀಜಿ ಅವರು ತಿಳಿಸಿದರು.
ಅವರು ಅಕ್ಷಯ ಕಾಲೇಜು ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಮಾತನಾಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರೊಫೆಸರ್ ಮಂಜಯ್ಯ ಡಿ.ಎಚ್. ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹೆತ್ತವರನ್ನು ಗೌರವಿಸಿ, ಅವರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲರಾಗಬೇಕು ಹಾಗೂ ಉತ್ತಮ ಧ್ಯೇಯಗಳನ್ನು ರೂಪಿಸಿಕೊಂಡು ಮುಂದುವರಿಯಬೇಕು. ‘ವಿದ್ಯಾದದಾತಿ ವಿನಯಂ’ ಎಂಬಂತೆ ವಿದ್ಯಾರ್ಥಿಗಳು ಸದಾ ವಿನಯವಂತರಾಗಿ ನಿಷ್ಠೆಯಿಂದ ತೊಡಗಿಕೊಂಡು ತಮ್ಮ ಎದುರಿನ ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು ಅವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಗೆ ಪೂರಕವಾಗಿ ಅತ್ಯುತ್ತಮ ಅವಕಾಶಗಳನ್ನು ಕಾಲೇಜು ಸದಾ ಒದಗಿಸುತ್ತದೆ ಹಾಗೂ ಕಾಲೇಜಿನಲ್ಲಿ ಕಲಿಯುವ ಪ್ರತೀ ವಿದ್ಯಾರ್ಥಿಗಳಿಗೆ ಬೇಕಾಗಿರುವ ಎಲ್ಲ ಸವಲತ್ತುಗಳನ್ನು ಒದಗಿಸಿ, ಅವರು ಅತ್ಯುತ್ತಮವಾಗಿ ರೂಪುಗೊಳ್ಳಲು ಪ್ರೇರೇಪಿಸುತ್ತದೆ
ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಿಗೆ ಪ್ರಮಾಣ ವಚನವನ್ನು ಬೋಧಿಸಿದರು. ಇತ್ತೀಚೆಗೆ ಹುತಾತ್ಮರಾದ ಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಹಾಗೂ ಮಡಿದ ಯೋಧರಿಗೆ ಈ ಸಂದರ್ಭದಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಅಕ್ಷಯ ಕಾಲೇಜಿನ ಎಂ.ಡಿ. ಕಲಾವತಿ ನಡುಬೈಲು, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು. ಸ್ವರ್ಣ ಜ್ಯೋತ್ಸ್ನ, ಕಾರ್ಯದರ್ಶಿ ಕು. ರಶ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ಅರ್ಪಿತ್ ಅವರು ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು. ಸ್ವರ್ಣ ಜ್ಯೋತ್ಸ್ನ ಅವರು
ವಂದಿಸಿದರು.
ವಿದ್ಯಾರ್ಥಿನಿಯರಾದ ಮೈತ್ರೇಯಿ ಮತ್ತು ಬಳಗ ಪ್ರಾರ್ಥಿಸಿದರೆ, ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.