ಪುತ್ತೂರು: ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳ ಜ.15-16 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ.
ಕಂಬಳಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಆಗಮಿಸಲಿದ್ದಾರೆ.
ಕಂಬಳದ ಪೂರ್ವಭಾವಿ ಸಭೆಯು ಡಿ.13 ರಂದು ನಡೆಯಿತು. ಸಭೆಯಲ್ಲಿ ಕಂಬಳ ಸಮಿತಿಯ ಉಪಾಧ್ಯಕ್ಷರಾಗಿ ಸುದರ್ಶನ್ ನಾಯ್ಕ್ ಕಂಪ, ಶಿವರಾಮ ಆಳ್ವ ಸಾಜಾ, ಜೋಕಿಂ ಡಿಸೋಜಾ, ವಸಂತ್ ರೈ ದುಗ್ಗಲ, ಕೋಶಾಧಿಕಾರಿಯಾಗಿ ಈಶ್ವರ ಭಟ್ ಪಂಜಿಗುಡ್ಡೆ ಆಯ್ಕೆಯಾದರು.
ವೇದಿಕೆಯಲ್ಲಿ ಕಂಬಳ ಸಮಿತಿಯ ಗೌರವಾಧ್ಯಕ್ಷ ವಿನಯ್ ಕುಮಾರ್ ಸೊರಕೆ, ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಉಪಾಧ್ಯಕ್ಷ ನಿರಂಜನ್ ರೈ, ಪ್ರಧಾನ ಕಾರ್ಯದರ್ಶಿದಿನೇಶ್ ಪಿ.ವಿ., ಈಶ್ವರ ಭಟ್ ಪಂಜಿಗುಡ್ಡೆ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಅರ್ಥ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ರಾಧಾಕೃಷ್ಣ ನಾಯ್ಕ್ ಉಪಸ್ಥಿತರಿದ್ದರು.
ಸಭೆಯಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ಹುತಾತ್ಮರಾದ ಯೋಧರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಕಂಬಳವು ಕರಾವಳಿ ಭಾಗದಲ್ಲಿ ಜಾನಪದ ಪರಂಪರೆಯಾಗಿ ಬೆಳೆದು ಬಂದಿದ್ದು,ಕಂಬಳವು ಕರಾವಳಿ ಜಿಲ್ಲೆಯ ಮಣ್ಣಿನ ಕ್ರೀಡೆಯಾಗಿದೆ. ರೋಮಾಂಚಕವಾಗಿರುವ ಈ ಕ್ರೀಡೆಯೂ ಕರಾವಳಿಗರ ಪಾಲಿನ ಅಚ್ಚುಮೆಚ್ಚಿನ ಕ್ರೀಡೆಯಾಗಿದೆ. ಪುತ್ತೂರಿನ ‘ಕೋಟಿ-ಚೆನ್ನಯ’ ಜೋಡುಕರೆ ಕಂಬಳವು ದೇವಳದ ಜಾತ್ರಾ ಗದ್ದೆಯಲ್ಲಿ ಪುತ್ತೂರಿನ ಜಾತ್ರೋತ್ಸವ ಮಾದರಿಯಲ್ಲಿ ನಡೆಯುತ್ತಿರುವ ಎರಡನೇ ಉತ್ಸವವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧ ಪಡೆದಿರುವ ‘ಪುತ್ತೂರು ಕಂಬಳ’ವನ್ನು ವೀಕ್ಷಿಸಲೆಂದು ಕರಾವಳಿಯ ಹಲವು ಭಾಗಗಳಿಂದ ಸಹಸ್ರಾರು ಜನ ಆಗಮಿಸುತ್ತಾರೆ… ಪುತ್ತೂರು ಜೋಡು ಕರೆ ಕಂಬಳವೂ ಮುತ್ತಿನ ನಗರಿಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.. ತುಳುನಾಡ ಮಣ್ಣಿನ ಕ್ರೀಡೆಯಾದಂತಹ ಕಂಬಳವೂ ಮುಂದಿನ ಪೀಳಿಗೆಯ ಸಂದರ್ಭದಲ್ಲೂ ಇದೇ ರೀತಿಯ ಸಂಭ್ರಮ-ಸಡಗರದಿಂದ ನಡೆಯಲಿ ಎಂಬುದು ನಮ್ಮೆಲ್ಲರ ಆಶಯವಾಗಿದೆ..