ಸುಳ್ಯ: ಬಸ್ ಮಾಲಕರೊಬ್ಬರು ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯದಲ್ಲಿ ನಡೆದಿದೆ.
ಮೃತರನ್ನು ಅವಿನಾಶ್ ಮೋಟಾರ್‌ನ ಮಾಲಕ ನಾರಾಯಣ ರೈ ಎನ್ನಲಾಗಿದೆ.
ನಾರಾಯಣ ರೈ ಯವರು ನಿನ್ನೆ ಅರಂಬೂರಿನ ತನ್ನ ಮನೆಯಲ್ಲಿದ್ದರು. ಅವರ ಪತ್ನಿ ಮತ್ತು ಮಕ್ಕಳು ಮದುವೆ ಸಮಾರಂಭವೊಂದಕ್ಕೆ ಬೆಂಗಳೂರಿಗೆ ತೆರಳಿದ್ದ ಹಿನ್ನಲೆಯಲ್ಲಿ ಸಂಬಂಧಿಯಾಗಿರುವ ಯುವಕನೊಬ್ಬ ಅವರೊಂದಿಗೆ ಮನೆಯಲ್ಲಿದ್ದ, ನಿನ್ನೆ ರಾತ್ರಿ 11.45 ರ ಸುಮಾರಿಗೆ ಅವರು ಅವಿನಾಶ್ ಮೋಟಾರ್‌ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತನ್ನ ತಂಗಿಯಾಗಿರುವ ನಳಿನಿಯವರಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದರು. ತಾನು ನಿಮ್ಮನ್ನೆಲ್ಲಾ ಬಿಟ್ಟು ಹೋಗುವುದಾಗಿ ವಾಯ್ಸ್ ಮೆಸೇಜ್‌ನಲ್ಲಿತ್ತು.
ಆದರೆ ತಡರಾತ್ರಿಯಾಗಿದ್ದುದರಿಂದ ಅವರು ಇಂದು ಬೆಳಗ್ಗೆಯಷ್ಟೇ ಈ ಮೆಸೇಜ್ ನೋಡಿದ್ದರು. ಕೂಡಲೇ ಅವರು ಮನೆಯಲ್ಲಿದ್ದ ಯುವಕನಿಗೆ ಫೋನ್ ಮಾಡಿದಾಗ ಅವರು ಫೋನ್ ತೆಗೆದಿರಲಿಲ್ಲ. ಈ ಹಿನ್ನಲೆಯಲ್ಲಿ ಫಿಟ್ಟರ್‌ಗೆ ಕರೆ ಮಾಡಿ ತಕ್ಷಣ ಹೋಗುವಂತೆ ತಿಳಿಸಿದರು.
ಕೂಡಲೇ ಅವರು ಮನೆಗೆ ಹೋಗಿ ಯುವಕನನ್ನು ಎಬ್ಬಿಸಿ ನಾರಾಯಣ ರೈಗಳ ಕೋಣೆಗೆ ಹೋಗಿ ನೋಡಿದಾಗ ಅವರು ಕೊಠಡಿಯೊಳಗೆ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರು.
ಮೃತದೇಹದ ಪಕ್ಕದಲ್ಲಿ ಡೆತ್‌ನೋಟ್ ಕೂಡಾ ಪತ್ತೆಯಾಗಿದ್ದು, ಅಸೌಖ್ಯದ ಹಿನ್ನಲೆಯಲ್ಲಿ ತನಗೆ ಬದುಕಲು ಕಷ್ಟವಾಗುತ್ತಿದೆ. ಮನೆಯವರಿಗೂ ಕಷ್ಟ ಕೊಡಲು ಮನಸ್ಸಿಲ್ಲ, ಹೀಗಾಗಿ ನಿಮ್ಮನ್ನೆಲ್ಲಾ ಬಿಟ್ಟು ಹೋಗುತ್ತಿದ್ದೇನೆ ಎಂದು ಅವರು ಅದರಲ್ಲಿ ದಾಖಲಿಸಿದ್ದಾರೆಂದು ತಿಳಿದು ಬಂದಿದೆ.
ಮೃತರು ಪತ್ನಿ ಹಾಗು ಇಬ್ಬರು ಪುತ್ರರನ್ನು ಅಗಲಿದ್ದಾರೆ.