ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷತೆಗೆ ಸೂತ್ರಬೆಟ್ಟು ಜಗನ್ನಾಥ ರೈ ಇಂದು ರಾಜೀನಾಮೆ ನೀಡಿದ್ದಾರೆ. ಪಕ್ಷದ ಆಂತರಿಕ ಬೆಳವಣಿಗೆಗಳಿಂದ ನೊಂದು ಅವರು ರಾಜೀನಾಮೆ ನೀಡಿದ್ದಾರೆ. ಅಧ್ಯಕ್ಷತೆಗೆ ಮಾತ್ರ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯಲಿದ್ದೇನೆ ಎಂದವರು ತಿಳಿಸಿದ್ದಾರೆ.
ಹೇಮನಾಥ ಶೆಟ್ಟಿ ಮತ್ತು ಅವರ ತಂಡ ದಶಕದ ಅಂತರದ ಬಳಿಕ ಫೆ. 6ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಆಗಮಿಸಿದ್ದು ಇದರ ನಂತರ ನಡೆದ ಬೆಳವಣಿಗೆ ಈ ರಾಜೀನಾಮೆಗೆ ಕಾರಣ ಎಂದು ತಿಳಿದು ಬಂದಿದೆ.
ಎರಡು ಬಣಗಳ ವಿಲೀನ ಈ ಆಗಮನದ ಮೂಲಕ ನಡೆದಿದೆ ಎಂದೇ ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗಿತ್ತು. ಕಾಂಗ್ರೆಸ್ ಕಚೇರಿಯಲ್ಲಿ ಭಾಷಣ ಮಾಡಿದ್ದ ಹೇಮನಾಥ ಶೆಟ್ಟಿ, ಸೂತ್ರಬೆಟ್ಟು ಅವರು ಕರೆ ಮಾಡಿ ಬರ ಹೇಳಿದ ಕಾರಣ ಬಂದೆ ಎಂದು ಹೇಳಿದ್ದರು.
ಇದರಿಂದ ಬೇಸರಗೊಂಡಿದ್ದ ಸೂತ್ರಬೆಟ್ಟು ಎರಡು ದಿನಗಳ ಬಳಿಕ ಸ್ಪಷ್ಟನೆ ನೀಡಿದ್ದರು. ನಾನು ಹೇಮನಾಥ ಶೆಟ್ಟಿಯವರಿಗೆ ಕರೆ ಮಾಡಿರಲಿಲ್ಲ. ಅವರು ಯಾಕೆ ಹಾಗೆ ಹೇಳಿದರೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.
ಸೂತ್ರಬೆಟ್ಟು ಅವರ ಆಮಂತ್ರಣದ ಮೇರೆಗೆ ಹೇಮನಾಥ ಶೆಟ್ಟಿ ಬಂದಿದ್ದಾರೆ ಎಂಬ ಮಾತು ಪಕ್ಷದೊಳಗೆ ಚರ್ಚೆಗೆ ಕಾರಣವಾಗಿದ್ದು, ಕೆಲವು ಹೇಮನಾಥ್ ಕಟ್ಟಾ ವಿರೋಧಿಗಳು ಪಕ್ಷದೊಳಗೆ ಸೂತ್ರಬೆಟ್ಟು ಅವರನ್ನು ಟೀಕಿಸಲಾರಂಭಿಸಿದ್ದರು.
ಈ ಬೆಳವಣಿಗೆಗೆ ಮತ್ತಷ್ಟು ಒತ್ತು ನೀಡುವ ರೀತಿಯಲ್ಲಿ ಹೇಮನಾಥ್ ಶೆಟ್ಟಿ ಬಣದ ಮತ್ತೊಬ್ಬ ಪ್ರಮುಖ ನಾಯಕ ಮಹಮ್ಮದ್ ಆಲಿ ಅವರು ಕೂಡಾ ಗುರುವಾರ ಕಾಂಗ್ರೆಸ್ ಕಚೇರಿಗೆ ಆಗಮಿಸಿದರು. ಈ ಸಂದರ್ಭ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಕೆಲವು ನಾಯಕರು ಮಾತ್ರ ಉಪಸ್ಥಿತರಿದ್ದರು.ತಮ್ಮ ಕಟ್ಟಾ ರಾಜಕೀಯ ವೈರಿಯಾಗಿರುವ ಮಹಮ್ಮದ್ ಆಲಿ ಅವರನ್ನು ಏಕಾ ಏಕಿ ಕಚೇರಿಗೆ ಕರೆಸಿಕೊಂಡಿದ್ದು ಮತ್ತು ಈ ವಿಚಾರದಲ್ಲಿ ತನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಸೂತ್ರಬೆಟ್ಟು ರಾಜೀನಾಮೆಗೆ ಕಾರಣ ಎನ್ನಲಾಗಿದೆ.