ಬೆಂಗಳೂರು: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಒಡೆತನ ಮತ್ತು ಪಾಲುದಾರಿಕೆಯಲ್ಲಿರುವ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಗಳನ್ನು ಮಾರಾಟ ಮಾಡದಂತೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ರೈ ಅವರನ್ನು ರಿಜಿಸ್ಟರ್ ವಿವಾಹವಾಗಿರುವ ಅನುರಾಧ ಮುತ್ತಪ್ಪ ರೈ ಸಲ್ಲಿಸಿದ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡ ನ್ಯಾಯಾಲಯ ಈ ಆದೇಶ ಹೊರಡಿಸಿದೆ.
ರೈ ಪುತ್ರರಾದ ರಾಕಿ ರೈ ಮತ್ತು ರಿಕ್ಕಿ ರೈ ಸಹಿತ 20 ಮಂದಿಯನ್ನು ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದೆ. ಮುತ್ತಪ್ಪ ರೈ ಒಡೆತನದ ಆಸ್ತಿಯಲ್ಲಿ ಮೂರನೇ ಒಂದು ಪಾಲು ನೀಡುವಂತೆ ಕೋರಿ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅನುರಾಧ ಕೇಸು ದಾಖಲಿಸಿದ್ದರು.
ಇದರೊಂದಿಗೆ 700 ಪುಟಗಳ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಈ ಸಂಬಂಧ 17 ಮಂದಿಗೆ ನ್ಯಾಯಾಲಯ ನೋಟಿಸ್ ಜಾರಿಗೊಳಿಸಿದೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಈ ಕುರಿತು ಮುತ್ತಪ್ಪ ರೈ ಪುತ್ರರು ಕಾನೂನು ಹೋರಾಟ ಮುಂದುವರಿಸಿದ್ದರು. ಆ ಬಳಿಕ ತಡೆಯಾಜ್ಞೆ ತೆರವುಗೊಂಡಿತ್ತು.
ಇದೀಗ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಮುತ್ತಪ್ಪ ರೈ ಒಡೆತನ ಮತ್ತು ಪಾಲುದಾರಿಕೆಯ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಅನುರಾಧ ಪರವಾಗಿ ಹಿರಿಯ ನ್ಯಾಯವಾದಿ ಬಿ.ವಿ. ಆಚಾರ್ಯ ವಾದಿಸುತ್ತಿದ್ದಾರೆ. ಮುಂದಿನ ವಿಚಾರಣೆ ಜ.11 ರಂದು ನಡೆಯಲಿದೆ.