ಮಂಗಳೂರು: ಕರಾವಳಿ ನಗರಿ ಮಂಗಳೂರಿನಲ್ಲೂ ಒಮಿಕ್ರಾನ್ ಭೀತಿ ತಲೆದೋರಿದೆ. ಹೈರಿಸ್ಕ್ ದೇಶವಾಗಿರುವ ಘಾನದಿಂದ ಆಗಮಿಸಿದ ಪ್ರಯಾಣಿಕರೊಬ್ಬರಲ್ಲಿ ರಾಪಿಡ್ ಆರ್.ಟಿ.ಪಿ.ಸಿ.ಆರ್. ತಪಾಸಣೆ ವೇಳೆ ಪಾಸಿಟಿವ್ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೆಂದ್ರ ಕೆ.ವಿ. ಅವರು ತುರ್ತಾಗಿ ಮಂಗಳೂರು ಏರ್ ಪೋರ್ಟ್ ಮುಖ್ಯಸ್ಥರು, ಏರ್ ಪೋರ್ಟ್ ಆರೋಗ್ಯಾಧಿಕಾರಿ (ಎ.ಪಿ.ಹೆಚ್.ಓ), ಜಿಲ್ಲಾ ಸರ್ವೇಕ್ಷಾಣಾಧಿಕಾರಿ (ಡಿ.ಎಸ್.ಓ), ಕೋವಿಡ್ ನೋಡಲ್ ಅಧಿಕಾರಿ ಹಾಗೂ ಅಪೋಲೋ ಲ್ಯಾಬ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು.
ಏರ್ ಪೋರ್ಟ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಸವಿಸ್ತಾರವಾಗಿ ಚರ್ಚಿಸಿ, ಘಾನ ದೇಶದಿಂದ ಬಂದ ಪ್ರಯಾಣಿಕರೊಬ್ಬರನ್ನು ವೆನ್‍ಲಾಕ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್‍ಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಪ್ರಯಾಣಿಕರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಿರುವುದಿಲ್ಲ. ಆ ಪ್ರಯಾಣಿಕ ಆಸೀನವಾಗಿದ್ದ 3 ಸಾಲಿನ ಎದುರು ಹಾಗೂ 3 ಸಾಲಿನ ಹಿಂದಿನ ಪ್ರಯಾಣಿಕರು ಸೇರಿದಂತೆ ಒಟ್ಟು 27 ಪ್ರಯಾಣಿಕರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಿ ಅವರನ್ನು ಆರೋಗ್ಯ ಇಲಾಖೆಯಿಂದ ರ್ಯಾಪಿಡ್ ಆರ್.ಟಿ.ಪಿ.ಸಿ.ಆರ್ ಮತ್ತು ಯಾರ್ಡ್ ಮೈಸ್ ಪರೀಕ್ಷೆಗೆ ಒಳಪಡಿಸಿ, ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.
ಪಾಸಿಟಿವ್ ಬಂದಿರುವ ಪ್ರಯಾಣಿಕರ ಗಂಟಲು ದ್ರವ್ಯ ಮಾದರಿಯನ್ನು ಜನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಈಗಾಗಲೇ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿಯವರು ವಿಮಾನ ನಿಲ್ದಾಣದ ಅಧಿಕಾರಿಯೊಂದಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ, ಇಮಿಗ್ರಿಯೇಶನ್, ಏರ್‍ಸುವಿಧಾ, ಚೆಕ್ಕಿಂಗ್ ಪಾಯಿಂಟ್, ಟ್ರಾನ್‍ಸಿಟ್ ಪ್ಯಾಸಿಂಜರ್ ಹಾಗೂ ರ್ಯಾಂಡಮೈಸ್ ಪರೀಕ್ಷೆಗಳ ಬಗ್ಗೆಯೂ ವಿವರವಾಗಿ ತಿಳಿದುಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.