ಬೆಂಗಳೂರು: ಹಣದ ವಿಚಾರವಾಗಿ ಯೋಗ ತರಬೇತುದಾರನೊಬ್ಬ ತನ್ನ ಪ್ರೇಯಸಿಯನ್ನೇ ಹತ್ಯೆ ಮಾಡಿದ ಭೀಕರ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅವರಿಬ್ಬರು ಭವ್ಯ ಭವಿಷ್ಯತ್ತಿನ ಕನಸನ್ನು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದರು. ದಾಂಡೇಲಿ ಮೂಲದವನಾಗಿದ್ದ ಆರೋಪಿ ಶ್ಯಾಮು ಯೋಗ ಶಿಕ್ಷಕನಾಗಿದ್ದು, ಬೆಂಗಳೂರಿನಲ್ಲಿಯೇ ಒಂದು ಯೋಗ ಟ್ರೈನಿಂಗ್ ಸೆಂಟರ್ ಆರಂಭಿಸಿದ್ದ.
ಈ ವೇಳೆ ಯೋಗ ತರಬೇತಿಗೆಂದು ಉಡುಪಿ ಮೂಲದ ಗಂಗಾ (24) ಎಂಬ ಯುವತಿ ಆರೋಪಿಯ ಬಳಿ ಕ್ಲಾಸ್ಗೆ ಬರುತ್ತಾರೆ. ಯೋಗದ ಜೊತೆ ಜೊತೆಗೆ ಇವರ ನಡುವೆ ಪ್ರೇಮಾಂಕುರವಾಗಿ ಮುಂದೇ ಫೆಬ್ರವರಿಯಲ್ಲಿ ಮದುವೆಯಾಗುವ ತಯಾರಿಯಲ್ಲಿರುತ್ತಾರೆ. ಅಷ್ಟರಲ್ಲಿ ದುರ್ಘಟನೆಯೊಂದು ಸಂಭವಿಸಿ ಬಿಡುತ್ತೆ.
ಇವರಿಬ್ಬರ ಪ್ರೀತಿಗೆ ಮುಳ್ಳಾಯ್ತಾ ಕಾಂಚಾಣ..!!?
ಆರೋಪಿ ಬಳಿ ಯೋಗ ತರಬೇತಿ ಪಡೆದ ಗಂಗಾ ತಾನು ತನ್ನ ಕಾಲ ಮೇಲೆ ನಿಲ್ಲಬೇಕು ಎಂದು ನಿರ್ಧರಿಸಿ ಪ್ರತ್ಯೇಕವಾಗಿ ಹೊಸ ಟ್ರೈನಿಂಗ್ ಕ್ಲಾಸ್ನ್ನ ಸ್ಟಾರ್ಟ್ ಮಾಡ್ತಾರೆ. ಈ ವೇಳೆ ಪ್ರಿಯಕರನಿಂದ ಗಂಗಾ ಒಂದು ಲಕ್ಷ ರೂಪಾಯಿ ಹಣ ಪಡೆದಿರುತ್ತಾರೆ ಎನ್ನಲಾಗಿದ್ದು ಅದೇ ವಿಚಾರವಾಗಿ ಜಗಳ ನಡೆದಾಗ ಆರೋಪಿ ಗಂಗಾಳ ತಲೆಯನ್ನು ಗೋಡೆಗೆ ಗುದ್ದಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಬುಧವಾರ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದು, ಆರೋಪಿಯನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.