ಪುತ್ತೂರು: ಅಕ್ಷಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ಇತ್ತೀಚೆಗೆ ಅಂತಿಮ ಡಿಪ್ಲೋಮಾ ವಿದ್ಯಾರ್ಥಿಗಳ ಫ್ಯಾಶನ್ ಶೋ ಹಾಗೂ ಬೀಳ್ಕೋಡುಗೆಯ ಸಮಾರಂಭವನ್ನು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಉದ್ಘಾಟಿಸಿ ‘ಭಾರತವು ಸುಸಂಸ್ಕೃತ ದೇಶ. ಉಡುಗೆಯಲ್ಲಿ ‘ಸೀರೆ’ ದೇಶದ ಹೆಮ್ಮೆ. ಸೀರೆಯಲ್ಲಿ 18 ಬಗೆಯ ಉಪಯೋಗಗಳಿದ್ದು, ಇದು ಬೇರೆ ಯಾವ ಉಡುಗೆಯಲ್ಲೂ ಇಲ್ಲ. ವಿದ್ಯಾರ್ಥಿಗಳು ವಿನ್ಯಾಸಗೊಳಿಸುವ ವಸ್ತ್ರಗಳು ಇದನ್ನು ಬಿಂಬಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಅಧ್ಯಕ್ಷರಾದ ಜಯಂತ್ ನಡುಬೈಲು ಅವರು ಮಾತನಾಡಿ, ಫ್ಯಾಶನ್ ಕ್ಷೇತ್ರ ಇಂದು ಬಹು ಬೇಡಿಕೆಯದ್ದಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಅವಕಾಶಕ್ಕಾಗಿ ನಮ್ಮ ಸಂಸ್ಥೆ ಸಹಕರಿಸುತ್ತಿದೆ. ಹಿರಿಯ ವಿದ್ಯಾಥಿಗಳ ಪ್ರತಿಭೆ, ಅವರ ವಸ್ತ್ರವಿನ್ಯಾಸ ಮತ್ತು ಫ್ಯಾಶನ್ ನಡಿಗೆಯಲ್ಲಿ ಅನಾವರಣಾವಾಗುತ್ತಿದೆ ಎಂದು ಹೇಳಿ ವಿದ್ಯಾರ್ಥಿಗಳಿಗೆ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ತೀರ್ಪುಗಾರರಾಗಿ ಆಗಮಿಸಿದ್ದ ಮಂಗಳೂರಿನ ರೂಪದರ್ಶಿಯರಾದ ಅಪೂರ್ವ ಹಾಗೂ ಬಿಂದುಶ್ರೀ ವಿದ್ಯಾರ್ಥಿಗಳಿಗೆ ಫ್ಯಾಶನ್ ಬಗ್ಗೆ ಮಾಹಿತಿ ನೀಡಿದರು. ಡಿಪ್ಲೋಮಾ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ ಉಡುಗೆಗಳನ್ನು ರೂಪದರ್ಶಿಗಳು ಧರಿಸಿ, ರ‍್ಯಾಂಪ್ ಶೋ ಮೂಲಕ ಪ್ರದರ್ಶಿಸಿದರು.
ಪ್ಯಾಶನ್ ಶೋನಲ್ಲಿ ಅತ್ಯುತ್ತಮ ಮಾಡೆಲ್ ಹಾಗೂ ಅತ್ಯುತ್ತಮ ವಸ್ತ್ರ ವಿನ್ಯಾಸಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕಾಲೆಜಿನ ಎಂ.ಡಿ ಕಲಾವತಿ ನಡುಬೈಲು, ಕಾಲೇಜಿನ ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸಂಪತ್ ಪಕ್ಕಳ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ಭವ್ಯಶ್ರೀ ವಂದಿಸಿದರು. ಮೈತ್ರೇಯಿ ಮತ್ತು ತಂಡ ಪ್ರಾರ್ಥಿಸಿದರೆ, ವಿದ್ಯಾರ್ಥಿನಿ ಮಿಶ್ರಿಯಾ ನಿರೂಪಿಸಿದರು.