ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಮಾಜಿ ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆಯವರ ಗೌರವಾಧ್ಯಕ್ಷತೆಯಲ್ಲಿ ಹಾಗೂ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ 29ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳದ ಕರೆ ಮುಹೂರ್ತವು ಡಿ.20 ರಂದು ನಡೆಯಿತು.
ಕಂಬಳ ಸಮಿತಿಯ ಸಂಚಾಲಕರಾದ ಎನ್.ಸುಧಾಕರ್ ಶೆಟ್ಟಿಯವರು ಹಾರೆಯಲ್ಲಿ ಕರೆಯ ಮಣ್ಣು ತೆಗಯುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು.
ಗ್ರಾಮೀಣ ಕ್ರೀಡೆ ಎನಿಸಿದ ಕಂಬಳವು ಪುತ್ತೂರಿನಲ್ಲಿ ಕಳೆದ 28 ವರ್ಷಗಳಿಂದ ಶ್ರೀ ಮಹಾಲಿಂಗೇಶ್ವರ ದೇವರ ಆಶೀರ್ವಾದದಿಂದ ಯಶಸ್ವಿಯಾಗಿ ನಡೆಯುತ್ತಿದ್ದು, ಈ ಕಂಬಳವನ್ನು ವೀಕ್ಷಿಸಲು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಆಗಮಿಸುತ್ತಿರುವುದೇ ಪುತ್ತೂರಿನ ಕಂಬಳದ ವೈಶಿಷ್ಟ್ಯವಾಗಿದೆ. ಮುಂಬರುವ ಜನವರಿ ತಿಂಗಳಿನಲ್ಲಿ ನಡೆಯುವ ಪುತ್ತೂರಿನ ಕಂಬಳಕ್ಕೆ ಸರ್ವರು ತುಂಬು ಹೃದಯದ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದರು.
ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿಯವರು ಮಾತನಾಡಿ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪುತ್ತೂರಿನ ಕಂಬಳಕ್ಕೆ ವಿಶೇಷ ಸ್ಥಾನಮಾನವಿದೆ. ಜಯಕರ್ನಾಟಕ ಸಂಸ್ಥಾಪಕ ದಿ.ಮುತ್ತಪ್ಪ ರೈಯವರ ಸಾರಥ್ಯದಲ್ಲಿ ಪುತ್ತೂರಿನ ಕಂಬಳ ಯಶಸ್ವಿಯಾಗಿ ಮೂಡಿ ಬಂದಿದ್ದು, ಈ ಬಾರಿಯ ಕಂಬಳವನ್ನು ನಾವೆಲ್ಲರೂ ಒಗ್ಗಟ್ಟಾಗಿ ಯಶಸ್ವಿಗೊಳಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ದಿನೇಶ್ ಕುಲಾಲ್, ಕೋಶಾಧಿಕಾರಿ ಈಶ್ವರ್ ಭಟ್ ಪಂಜಿಗುಡ್ಡೆ, ಉಪಾಧ್ಯಕ್ಷರಾದ ಸುದರ್ಶನ್ ನಾಕ್ ಕಂಪ, ಜೋಕಿಂ ಡಿ’ಸೋಜ, ಜಿನ್ನಪ್ಪ ಪೂಜಾರಿ ಮುರ, ಜೊತೆ ಕಾರ್ಯದರ್ಶಿ ಪ್ರೇಮಾನಂದ ನಾಕ್, ಪ್ರಮುಖರಾದ ಸುದೇಶ್ ಚಿಕ್ಕಪುತ್ತೂರು, ಉಮೇಶ್ ಕರ್ಕೇರಾ, ಬನ್ನೂರು, ಅವಿನ್ ಗಲ್ಬಾವೋ, ಶಶಿಧರ್ ನೆಲ್ಲಿಕಟ್ಟೆ ಹಾಗೂ ಮತ್ತಿತರರು ಉಪಸ್ಥಿತರಿದ್ದರು.