ಉಪ್ಪಿನಂಗಡಿ: ಪೊಲೀಸರ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಕೆಲವರು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಸುಳ್ಳು ಆರೋಗ್ಯದ ನೆಪವೊಡ್ಡಿ ಆರೋಪಿಗಳಿಗೆ ಹೈಲ್ಯಾಂಡ್ ಆಸ್ಪತ್ರೆ ರಕ್ಷಣೆ ಕೊಡುತ್ತಿದ್ದು, ಪೊಲೀಸರಿಗೆ ಆರೋಪಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಒಪ್ಪಿಸಲು ನಿರಾಕರಿಸುತ್ತಿದೆ ಎಂದು ಆರೋಪಿಸಿ ಬಜರಂಗದಳ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.
ಉಪ್ಪಿನಂಗಡಿಯಲ್ಲಿ ಡಿ. 14 ರಂದು ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಎಫ್.ಐ.ಮತ್ತು ಎಸ್.ಡಿ.ಪಿ.ಐ. ನ ಕಾರ್ಯಕರ್ತರು ಉಪ್ಪಿನಂಗಡಿ ಪೊಲೀಸರ ಮೇಲೆ ದಾಳಿ ನಡೆಸಿದ್ದು, ತಲವಾರು ಮಾರಕಾಸ್ತ್ರಗಳನ್ನು ಹಿಡಿದು ದಾಳಿ ಮಾಡಿ ಪೊಲೀಸರಿಗೆ ಹಲ್ಲೆ ನಡೆಸಿದ ಸಂದರ್ಭದಲ್ಲಿ ಪೊಲೀಸರು ನಡೆಸಿದ ಲಾಠಿಚಾರ್ಜ್ ನಲ್ಲಿ ಅಲ್ಪ ಸ್ವಲ್ಪ ಗಾಯಗೊಂಡ 25 ಕ್ಕೂ ಹೆಚ್ಚು ಕಾರ್ಯಕರ್ತರು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ದಾಖಲಾದ ಎಲ್ಲಾ ಜನರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಪ್ರಕರಣದಲ್ಲಿ ಕೇಸು ದಾಖಲಾಗಿದ್ದು, ಆದರೆ ಸುಳ್ಳು ಆರೋಗ್ಯದ ನೆಪವೊಡ್ಡಿ ಆರೋಪಿಗಳಿಗೆ ಹೈಲ್ಯಾಂಡ್ ಆಸ್ಪತ್ರೆ ರಕ್ಷಣೆ ಕೊಡುತ್ತಿದ್ದು, ಪೊಲೀಸರಿಗೆ ಆರೋಪಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಒಪ್ಪಿಸಲು ನಿರಾಕರಿಸುತ್ತಿದೆ. ಪೋಲೀಸರ ಮೇಲೆ ಕೊಲೆ ನಡೆಸಲು ಹುನ್ನಾರ ನಡೆಸಿದ ಆರೋಪಿಗಳಿಗೆ ಹೈಲ್ಯಾಂಡ್ ಆಸ್ಪತ್ರೆಯ ಮಂಡಳಿ ರಕ್ಷಣೆ ಕೊಡುತ್ತಿದ್ದು, ಆ ಆಸ್ಪತ್ರೆಯ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಕ್ಷಣ ಆರೋಪಿಗಳನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪೊಲೀಸರಿಗೆ ಒಪ್ಪಿಸದಿದ್ದಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಜರಂಗದಳ ವಿಭಾಗ ಸಂಚಾಲಕ್ ಭುಜಂಗ ಕುಲಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.