ವಿಟ್ಲ: ೪೦೦ ಕೆ. ವಿ. ಉಡುಪಿ ಕಾಸರಗೋಡು ವಿದ್ಯುತ್ ಮಾರ್ಗದ ಕಾರ್ಯವನ್ನು ಸ್ಥಗಿತ ಮಾಡುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರೂ, ಕಂಪನಿಯ ಸಿಬ್ಬಂದಿಗಳು ವೀರಕಂಭ ಅರಣ್ಯ ವ್ಯಾಪ್ತಿಯಲ್ಲಿ ಕೆಲಸಕ್ಕೆ ಬಂದ ಹಿನ್ನಲೆಯಲ್ಲಿ ಸ್ಥಳೀಯ ನಿವಾಸಿಗಳು ವಿಟ್ಲ ಪಟ್ಟಣ ಪಂಚಾಯತಿ ಚುನಾವಣೆಯನ್ನು ಬಹಿಷ್ಕಾರ ಹಾಕಿರುವ
ಬಗ್ಗೆ ವಿವಿಧ ಕಡೆಯಲ್ಲಿ ಬ್ಯಾನರ್ ಅಳವಡಿಸಿದ್ದಾರೆ.
ನೆಕ್ಕಿಲಾರು ಭಾಗದ ಕೆಲವು ಮನೆಯಲ್ಲಿ ೪೦೦ಕೆವಿ ವಿದ್ಯುತ್ ಮಾರ್ಗ ಹಾದುಹೋಗುತ್ತಿದ್ದು, ಜೀವ ಹಾಗೂ ಜೀವನಕ್ಕೆ ಅಪಾಯವಿರುವ ಕಾರಣ ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ವ್ಯಕ್ತಿಗಳು ‘ಪತ್ರಕ್ಕೆ ಸಹಿ ಹಾಕಿದರೆ ಅವರಿಗೆ ಮನೆಯ ಓಟು ನೀಡಲಾಗುವುದು ಎಂಬ ಫಲಕವನ್ನು ಅಂಟಿಸಲಾಗಿದೆ. ಯಾರೂ ಸಹಿ ಮಾಡದೇ ಹೋದಲ್ಲಿ ಮನೆ
ಮಂದಿ ಮತದಾನ ಬಹಿಷ್ಕಾರ’ ಹಾಕುವುದಾಗಿ ಹೇಳಿದ್ದಾರೆ.
ರೈತರ ಬ್ಯಾನರ್ ಗಳು ಸಾರ್ವಜನಿಕ ಸ್ಥಳದಲ್ಲಿ ಬೀಳುತ್ತಿದ್ದಂತೆ ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಜನರ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಬ್ಯಾನರ್ ತೆರವು ಮಾಡಿ ಎಂಬ ಮಾತುಗಳನ್ನು ಹೇಳಿದ್ದಾರೆ. ಆದರೆ ರೈತರು ಬ್ಯಾನರ್ ತೆರವು ಮಾಡಿದರೆ ಅಧಿಕಾರಿಗಳ ಕಛೇರಿ ಮುಂದೆ ಧರಣಿ ಕೂರುವ ಎಚ್ಚರಿಕೆಯನ್ನು ನೀಡಿದ ಹಿನ್ನಲೆ ಸ್ಥಳದಿಂದ ತೆರಳಿದ್ದಾರೆ ಎನ್ನಲಾಗಿದೆ.