ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಎಂಬ ನಿಸರ್ಗ ರಮಣೀಯ ತಾಣದಲ್ಲಿ ನೆಲೆ ನಿಂತಿರುವ ಜಗನ್ಮಾಥೆ, ಆದಿದೇವತೆ ತಾಯಿ ಮಹಿಷಮರ್ದಿನಿ ದೇವಿ ಕ್ಷೇತ್ರವೇ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ…
ದೇಗುಲಕ್ಕಿದೆ ಐತಿಹ್ಯ:
ದೈವಜ್ಞ, ಪ್ರಶ್ನಾ ಚಿಂತಕರು ಹಾಗೂ ಇತಿಹಾಸಕಾರರ ಪ್ರಕಾರ ಕ್ಷೇತ್ರಕ್ಕೆ ಸರಿಸುಮಾರು 800 ವರ್ಷಗಳಿಗಿಂತಲೂ ಅಧಿಕ ಇತಿಹಾಸವಿದೆ. ಈ ಪುಣ್ಯದ ಮಣ್ಣಿನಲ್ಲಿ ನೆಲೆನಿಂತಿರುವ ಶ್ರೀ ದೇವಿಯ ಆರಾಧನೆಯನ್ನು ಸ್ವರ್ಗೀಯ ಮಹಾಬಲ ಐತಾಳರ ಪೂರ್ವಿಕರು ನಡೆಸುತ್ತಿದ್ದರು. ಜತೆಗೆ ಇಲ್ಲಿ ವೇದಪಾಠಗಳನ್ನು ಹೇಳಿ ಕೊಡಲಾಗುತ್ತಿತ್ತು. ಹಾಗೆ ಮಠ ಸಂಪ್ರದಾಯದ ಹಿನ್ನೆಲೆ ಇರುವ ಕಾರಣ ಕ್ಷೇತ್ರಕ್ಕೆ ಮಠಂತಬೆಟ್ಟು ಎನ್ನುವ ಹೆಸರು ಬಂದಿದೆ ಎನ್ನುವ ಪ್ರತೀತಿಯೂ ಇದೆ.
ಹುಲ್ಲಿನ ಮಾಡಿನಿಂದ ಆಧುನಿಕತೆಯ ಸ್ಪರ್ಶ :
800 ವರ್ಷಗಳ ಹಿಂದೆ ದೇವಿಯ ಗುಡಿಯು ಹುಲ್ಲುಹಾಸಿನ ಮಾಡಿನಿಂದ ಇದ್ದು, ಬಳಿಕ ಸಮಸ್ಯೆ ಅರಿತು ಹಂಚಿನ ಮಾಡೊಂದನ್ನು ನಿರ್ಮಿಸಲಾಯಿತು. ಮಳೆ ಬಂದು ಮತ್ತೂ ಸಮಸ್ಯೆಗಳೇ ಎದುರಾದಾಗ ಇದನ್ನರಿತ ಆಗಿನ ಸಮಿತಿ ಅಧ್ಯಕ್ಷರಾಗಿದ್ದ ರಾಜೇಂದ್ರ ಆರಿಗರವರ ಮೂಲಕ ಹಲವಾರು ವ್ಯವಸ್ಥೆಗಳು ಕ್ಷೇತ್ರದಲ್ಲಿ ನಡೆದು ಬರುತ್ತವೆ. ಆರ್ಥಿಕ ಸಮಸ್ಯೆಯ ಕಾರಣಕ್ಕೆ ಭಾರೀ ಬದಲಾವಣೆ ತರಲು ಸಾಧ್ಯ ಆಗದೇ ಇದ್ದುದರಿಂದ ಹಲವಾರು ವರ್ಷಗಳ ಕಾಲ ಜೀರ್ಣೋದ್ಧಾರ ಕಾರ್ಯ ನಿಂತು, ಬಳಿಕ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷೀಯ ಅವಧಿ ಬಳಿಕ ಮತ್ತೆ ಇಲ್ಲಿ ಹಲವಾರು ಜೀರ್ಣೋದ್ಧಾರ ಕಾರ್ಯಗಳನ್ನು ನಡೆಸಲಾಯಿತು. ಯಾರೂ ಊಹಿಸದ ರೀತಿಯಲ್ಲಿ ದೇಗುಲದ ಕಾರ್ಯಗಳು ನಡೆದು ಬರುತ್ತವೆ. 2007ರಲ್ಲಿ ವಿಜೃಂಭಣೆಯಿಂದ ಬ್ರಹಕಲಶೋತ್ಸವೂ ನಡೆದು ಅಂದಿನಿಂದ ಇಂದಿನವರೆಗೂ ಪೂಜಾ ವಿಧಿ ವಿಧಾನಗಳನ್ನು ಅನುಸರಿಸಲಾಗುತ್ತಿದ್ದು, ದೇವಿಯ ಕಾರಣಿಕಕ್ಕೆ ಪ್ರತ್ಯಕ್ಷ ನಿದರ್ಶನವನ್ನೂ ಕಾಣಬಹುದಾಗಿದೆ.
ಕಾರಣಿಕದ ಆಗರ ಈ ದೇಗುಲ:
ದೇಗುಲದಲ್ಲಿ ಮಾತೆ ಮಹಿಷಮರ್ದಿನಿಯ ಜತೆಗೆ ರಕ್ತೇಶ್ವರಿ, ಮಹಿಷಂದಾಯ, ಗುಳಿಗ ದೈವಗಳನ್ನೂ ಆರಾಧಿಸಿಕೊಂಡು ಬರಲಾಗುತ್ತಿದೆ. ಕ್ಷೇತ್ರ ಅಭಿವೃದ್ಧಿಯಾದಂತೆ ದೇವಿಯ ಕಾರಣಿಕ ಕೋಡಿಂಬಾಡಿಯ ಭಕ್ತರ ಮನೆ ಮನಗಳಲ್ಲಿ ಬೆಳಗಿ ನಿಂತಿದೆ. ನಂಬಿ ಬಂದ ಭಕ್ತರಿಗೆ ಇಂಬನ್ನು ಕೊಡುವ ದೇವಿಯ ತಾಣದಲ್ಲಿ ಕಂಕಣ ಭಾಗ್ಯ ಕೂಡಿ ಬರದ ಯುವತಿಯರಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನಭಾಗ್ಯ, ವಿದ್ಯೆ, ಆರೋಗ್ಯ, ಸಂಪತ್ತು ಹೀಗೆ ದೇವಿಯ ಬಳಿ ತಮ್ಮ ಮನದಿಚ್ಛೆಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದಲಿ ಕೇಳಿ ಕೊಂಡಲ್ಲಿ ದೇವಿಯು ಅನುಗ್ರಹ ತೋರುವಳು. ಅತೀ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲ್ಪಟ್ಟಿದ್ದ ಗ್ರಾಮದಲ್ಲಿ ದೇವಿಯ ಜೀರ್ಣೋದ್ಧಾರ ಕಾರ್ಯ ಆರಂಭವಾದ ದಿನದಿಂದಲೇ ಈ ಕಳಂಕವೂ ದೂರವಾಗಿದೆ. ಭಕ್ತರ ಅಭೀಷ್ಟಗಳನ್ನು ದೇವಿ ನಿತ್ಯವೂ ನೆರವೇರಿಸುತ್ತಿರುವುದೇ ಇಲ್ಲಿನ ವಿಶೇಷ. ದೇವಿಯ ಶಕ್ತಿಯಿಂದ, ದೇವಿ ಕೃಪಕಟಾಕ್ಷದಿಂದ ಮಾತು ಬಾರದ ಮಗುವೊಂದು ಮಾತನಾಡುತ್ತೆ, ಪ್ರಸವವಾಗದ ಮಹಿಳೆಗೆ ಪ್ರಸವ ಕಾರ್ಯವೂ ಆಗುತ್ತೆ, ನಡೆಯಲಾಗದ ಮಗು ಮತ್ತೆ ನಡೆದಾಡುತ್ತೆ ಅನ್ನುವ ಸತ್ಯ ಕಥೆಗಳನ್ನು ಕೇಳಿದರೆ ಇಂದಿಗೂ ಮೈ ಜುಮ್ ಎನಿಸುತ್ತದೆ.
ಕೋಡಿಂಬಾಡಿ ಅಶೋಕ್ ಕುಮಾರ್ ರೈ ಮುಂದಾಳತ್ವ : ಇದೀಗ 2021ರ ವೇಳೆಯಲ್ಲಿ ದೇಗುಲವು ವಿರಾಜಮಾನವಾಗಿ ಕಂಗೊಳಿಸುತ್ತಿದ್ದು, ಡಿಸೆಂಬರ್ 21 ರಿಂದ 27ರವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮವೂ ಮನೆ ಮಾಡಿದೆ. ಉದ್ಯಮಿ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಮುಂದಾಳತ್ವದಲ್ಲಿ, ಊರ ಪರವೂರ ಭಕ್ತರ ಶ್ರಮದಾನದ ಫಲವಾಗಿ ದೇಗುಲದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದು ಬಂದು, ದೇವಿಯ ಆರಾಧನೆಯ ಮೆರುಗು ಇಮ್ಮಡಿಯಾಗಿದೆ. ಪುಟ್ಟದಾಗಿ ನಿರ್ಮಿತಗೊಂಡು ಆರಾಧಿಸಲ್ಪಡುತ್ತಿದ್ದ ಕ್ಷೇತ್ರದ ಮಹಿಮೆ ಹತ್ತೂರಿಗೂ ಪಸರಿಸಿ ಇಂದು ಹೆಮ್ಮರವಾಗಿ ಬೆಳೆದು ಅಭಿವೃದ್ಧಿಗೊಂಡಿದೆ ಅನ್ನುವುದೇ ಸಂತಸದ ವಿಚಾರ.
ತನ್ನ ಗ್ರಾಮದಲ್ಲೊಂದು ದೇಗುಲ ನಿರ್ಮಿಸಿ, ಅದರ ಅಭಿವೃದ್ಧಿಗೆ ಶ್ರಮಿಸುವುದು ಸುಲಭದ ಕಾರ್ಯವಲ್ಲ. ಹಾಗಿರುವಾಗ ಅಶೋಕ್ ಕುಮಾರ್ ರೈ ಅವರ ಶ್ರಮ ಇಂದಿನ ಸಂಭ್ರಮಕ್ಕೆ ನಾಂದಿಯಾಗಿದೆ. ಹಲವಾರು ವರುಷಗಳ ಪರಿಶ್ರಮದ ಫಲವಾಗಿ ದೇವೀತಾಣ ನಗು ಬೀರುವಂತಾಗಿದೆ.
ರಾಜಮಾರ್ಗದಂತೆ ಕಂಗೊಳಿಸುತ್ತಿದೆ ಆಲಯದ ಮಾರ್ಗ:
ದೇಗುಲವೆಂದರೆ ಭಕ್ತಿ – ಶಾಂತಿಯ ತಾಣ. ದೇಗುಲದಲ್ಲಿ ನಡೆಯುವ ಉತ್ಸವವೆಂದರೆ ಊರಿಗೇ ಸಂಭ್ರಮ ತರುವ ಬೃಹತ್ ಹಬ್ಬ. ಪ್ರತಿಯೊಬ್ಬರ ಮನೆ-ಮನದಲ್ಲೂ ಹಬ್ಬದ ವಾತಾವರಣ. ಅಂತೆಯೇ ಬ್ರಹಕಲಶೋತ್ಸವದ ತಾಣದ ದಾರಿಯುದ್ದಕ್ಕೂ ಸೌಂದರ್ಯ ಕಳೆ ಎದ್ದು ಕಾಣುವಂತಿದೆ. ಕೇಸರಿ ಪತಾಕೆಯ ಸಾಲಿನೊಡನೆ, ಕೈ ಬೀಸಿ ಕರೆವ ಮಹಾದ್ವಾರಗಳು, ಪುತ್ತೂರು ಆಸುಪಾಸಿನವರೆಗೂ ಕಾಣಸಿಗುವ ಬ್ಯಾನರ್ ಗಳು, ಸಂಪೂರ್ಣವಾಗಿ ಬೆಳಕನ್ನು ನೀಡುವ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಕಣ್ಮನ ಸೆಳೆಯುತ್ತಿವೆ.
ವೈಭವದ ಬ್ರಹಕಲಶೋತ್ಸವ:
ಡಿ. 21ರಿಂದಲೂ ದಿನಕ್ಕೊಂದು ವೈವಿಧ್ಯಮಯ ಕಾರ್ಯಕ್ರಮ ನಡೆಯುತ್ತಿದ್ದು, ಧಾರ್ಮಿಕ ಸಭಾ ಕಾರ್ಯಕ್ರಮ, ವೈದಿಕ ಕಾರ್ಯಕ್ರಮ ಇದರ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜನೆಯ ಗಾಳಿ ಬೀಸುತ್ತಿದೆ. ಇಷ್ಟೇ ಅಲ್ಲದೆ ವಿಜೃಂಭಿತ ಸಭಾ ವೇದಿಕೆ, ಪ್ರಾಚ್ಯ ವಸ್ತು ಪ್ರದರ್ಶನ ಸಿರಿ ಚಾವಡಿ, ಉಗ್ರಾಣದ ವ್ಯವಸ್ಥೆ ಒಟ್ಟಿನಲ್ಲಿ ಹಲವು ವಿಶೇಷತೆಗಳನ್ನು ಹೊತ್ತು ನಿಂತಿದೆ ದೇವಾಲಯ.
ಹಲವು ವರ್ಷಗಳ ಕನಸು-ನನಸಾದಾಗ ಬೆರೆತ ಜನಸ್ತೋಮ, ಸಾಗರದಂತೆ ಉಕ್ಕಿ ಬಂದ ಸಂಭ್ರಮದ ಮೆರುಗು, ಹೊಸತನವನ್ನು ಕಟ್ಟಿ ಕೊಟ್ಟ ನೂರಾರು ವಿಭಿನ್ನತೆಗಳು, ಒಂದಷ್ಟು ಐತಿಹ್ಯ, ಜತೆಗೆ ದೇವೀ ಪವಾಡ.. ಒಟ್ಟಿನಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾದ ಅಚ್ಚರಿಯ ದಿನಕ್ಕೆ ದೇವಿ ತಾಣ ಸಾಕ್ಷಿಯಾಗಿದೆ.
✍️ಪ್ರಜ್ಞಾ ಓಡಿಲ್ನಾಳ..