ಮಂಗಳೂರು: ನಗರದ ಬಂದರ್ ನಲ್ಲಿ ಮೀನುಗಾರನೊಬ್ಬನನ್ನು ಬೋಟ್ ನ ಕ್ರೇನ್ ಒಂದಕ್ಕೆ ತಲೆಕೆಳಗೆ ತೂಗು ಹಾಕಿ ಸಹ ಕಾರ್ಮಿಕರು ದೌರ್ಜನ್ಯವೆಸಗಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಬೆಸ್ತ ಸಮುದಾಯದ ವೈಲ ಶೀನು ಎನ್ನಲಾಗಿದೆ.
ವೈಲ ಶೀನು ನನ್ನು ಇತರ ಮೀನುಗಾರ ಕಾರ್ಮಿಕರು ಬೋಟ್ ನ ಕ್ರೇನ್ ಗೆ ಕಾಲು ಕಟ್ಟಿ ತಲೆಕೆಳಗೆ ತೂಗು ಹಾಕಿ ಹಿಂಸಿಸುತ್ತಿರುವ ಹಾಗೂ ಹೊಡೆಯುವಂತೆ ಪ್ರೇರೆಪಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿಯಾಗಿ ತೂಗು ಹಾಕಿದ್ದರು ಎಂದು ಪೊಲೀಸ್ ಮಾಹಿತಿ ತಿಳಿಸಿದೆ. ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು , ದೌರ್ಜನ್ಯವೆಸಗಿದ ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.