ಸುಳ್ಯ: ಬಾಡಿಗೆ ನೆಪದಲ್ಲಿ ರಿಕ್ಷಾ ಚಾಲಕನನ್ನು ಕರೆದೊಯ್ದು ಹಲ್ಲೆ ನಡೆಸಿ ಆತನಿಂದ ರಿಕ್ಷಾ ದರೋಡೆಗೈದ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.
ಅಜ್ಜಾವರದಿಂದ ಆಟೋರಿಕ್ಷಾವನ್ನು ಮಂಡೆಕೋಲಿಗೆ ಬಾಡಿಗೆಗೆಂದು ಇಬ್ಬರು ಕರೆದೊಯ್ದಿದ್ದು, ಆಟೋ ಅಡ್ಪಂಗಾಯ ತಲುಪುತ್ತಿದ್ದಂತೆ ಆಟೋದಲ್ಲಿದ್ದ ವ್ಯಕ್ತಿ ಏಕಾಏಕಿ ಆಟೋ ಚಾಲಕ ಹುಸೈನ್ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಆಟೋ ಚಾಲಕನ ಬಳಿಯಲ್ಲಿದ್ದ ಮೊಬೈಲ್ ಮತ್ತು ಹಣವನ್ನು ಕಿತ್ತು ಆಟೋ ಸಮೇತ ಕೇರಳದ ಕಡೆಗೆ ಪರಾರಿಯಾಗಿದ್ದು, ಘಟನೆ ತಿಳಿದ ಸ್ಥಳೀಯರು ಆದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಆದೂರು ಪೊಲೀಸರು ದೇವರಡ್ಕ ಪುದಿಯಂಬಲಂ ಎಂಬಲ್ಲಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.