ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗಗಳೂ ಸೇರಿದಂತೆ ಒಟ್ಟಾರೆಯಾಗಿ ಇನ್ನೂ 1,15,000 ಮಂದಿ ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಒಮಿಕ್ರಾನ್‌ನಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿ ಎಲ್ಲರೂ ಲಸಿಕೆ ಪಡೆದುಕೊಳ್ಳುವುದು ಅತ್ಯಗತ್ಯ. ಜಿಲ್ಲೆಯ ಒಟ್ಟು 16 ಲಕ್ಷ ಮಂದಿ ಲಸಿಕೆ ಪಡೆದುಕೊಂಡಿದ್ದು ಇನ್ನೂ ಲಕ್ಷಕ್ಕೂ ಮಿಕ್ಕಿ ಮಂದಿ ಬಾಕಿ ಉಳಿದಿದ್ದಾರೆ ಎಂದವರು ವಿವರಿಸಿದರು.
ಪ್ರಥಮ ಡೋಸ್‌ಗೆ 1.15 ಲಕ್ಷ ಮತ್ತು 70 ಸಾವಿರ ಮಂದಿ ಎರಡನೇ ಡೋಸ್ ಪಡೆಯಲು ಬಾಕಿ ಇದೆ. ಕೆಲವೊಂದು ಸಮುದಾಯದ ಜನರು ವ್ಯಾಕ್ಸಿನ್ ಪಡೆಯಲು ಮುಂದೆ ಬರುತ್ತಿಲ್ಲ. ಅಂಥವರಿಗೆ ಧರ್ಮ ಗುರುಗಳು, ಗ್ರಾಮ ಪಂಚಾಯತ್ ಸದಸ್ಯರು, ಶಾಸಕರ ಮೂಲಕ ಜಾಗೃತಿ ಮೂಡಿಸಿ ವ್ಯಾಕ್ಸಿನ್ ಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಮೂಲ ಇನ್ನೂ ಪತ್ತೆಯಾಗಿಲ್ಲ:
ಜಿಲ್ಲೆಯಲ್ಲಿ ಕಂಡುಬಂದಿರುವ ಒಮಿಕ್ರಾನ್ ಪ್ರಕರಣಗಳ ಮೂಲ ಇನ್ನೂ ಪತ್ತೆಯಾಗಿಲ್ಲ, ಆದರೆ ಸೋಂಕಿತ ರೆಲ್ಲರೂ ಆರೋಗ್ಯವಾಗಿದ್ದಾರೆ, ಎಲ್ಲರಿಗೂ 10 ದಿನದ ಬಳಿಕ ಎರಡು ಬಾರಿ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಬಂದ ಕೂಡಲೇ ಅವರನ್ನು ಐಸೊಲೇಶನ್‌ನಿಂದ ಬಿಡುಗಡೆ ಮಾಡಲಾಗುತ್ತದೆ ಎಂದರು.
ಪ್ರಸ್ತುತ ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಯುತ್ತಿರುವ ಕೇರಳ ಮೂಲದವರು ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ರಜೆಗಾಗಿ ಊರಿಗೆ ತೆರಳುತ್ತಿದ್ದಾರೆ, ಅಂತಹವರು ಮರಳಿ ಬರುವಾಗ ಆರ್‌ಟಿಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ತರುವುದು ಕಡ್ಡಾಯ ಮಾಡಲಾಗಿದೆ. ಅವರ ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್‌ಗಳಿಗೂ ಅವರನ್ನು ಪ್ರತ್ಯೇಕವಾಗಿ 7 ದಿನ ಇರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಪ್ರಸ್ತುತ ಜಿಲ್ಲೆಯ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸುತ್ತಿದ್ದು, ವರದಿ ಬರುವಾಗ ತಡವಾಗುತ್ತಿದೆ, ಅದಕ್ಕಾಗಿ ಮಂಗಳೂರಿನಲ್ಲೇ ಜೆನೋಮ್ ಸೀಕ್ವೆನ್ಸ್ ಲ್ಯಾಬ್ ಪ್ರಾರಂಭಿಸುವ ಬಗ್ಗೆ ಪ್ರಸ್ತಾವನೆಯನ್ನು ಸರಕಾರಕ್ಕ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.