ಸವಣೂರು: ಮನುಷ್ಯ ಎಷ್ಟೇ ವೈಜ್ಞಾನಿಕವಾಗಿ ಮುಂದುವರೆದರೂ ಧಾರ್ಮಿಕ ಆಚರಣೆಗಳಲ್ಲಿನ ನಂಬಿಕೆ ಮಾತ್ರ ಇನ್ನೂ ಬಲವಾಗಿದೆ. ಹಾಗಾಗಿ ಪ್ರತಿಯೊಂದು ಗ್ರಾಮದಲ್ಲೂ ದೇವಸ್ಥಾನ ತಲೆಯೆತ್ತಿ ನಿಂತಿರುತ್ತದೆ. ಶ್ರದ್ಧಾಭಕ್ತಿಯಿಂದ ಪೂಜೆ, ಪುನಸ್ಕಾರಗಳು ಸದಾ ನಡೆಯುತ್ತಲೇ ಇರುತ್ತವೆ. ಹಾಗೆಯೇ ದೇವಾಲಯ ನಿರ್ಮಾಣ ಈ ಗ್ರಾಮದ ಜನರ ಕನಸಾಗಿತ್ತು. ಗ್ರಾಮದಲ್ಲಿ ಸುಂದರವಾಗಿ ಸುಬ್ರಹ್ಮಣೇಶ್ವರ ಸ್ವಾಮಿಯ ದೇವಸ್ಥಾನ ತಲೆ ಎತ್ತಬೇಕೆಂದು ಹಲವು ತಿಂಗಳುಗಳ ಕಾಲ ಗ್ರಾಮದ ಜನರು ಶ್ರಮದಾನ ಮಾಡಿದರು. ಸಾಯಾಂಕಾಲ 6 ಗಂಟೆಯಿಂದ ಪ್ರಾರಂಭ ಮಾಡಿದರೆ ಮಧ್ಯರಾತ್ರಿಯನ್ನೂ ಲೆಕ್ಕಿಸದೆ ದುಡಿಯುತ್ತಿದ್ದರು.
ಗ್ರಾಮಸ್ಥರ ಶ್ರಮದ ಫಲವಾಗಿ ಇದೀಗ ಭವ್ಯವಾದ ದೇವಾಲಯ ತಲೆ ಎತ್ತಿನಿಂತಿದೆ. ಸುಬ್ರಹ್ಮಣ್ಯೇಶ್ವರ ಗರ್ಭಗುಡಿಯಲ್ಲಿ ವಿರಾಜಮಾನರಾಗುವ ಕಾಲ ಸನ್ನಿಹಿತವಾಗಿದೆ. ಊರಿಗೇ ಊರೇ ಸಂಭ್ರಮದಲ್ಲಿ ಮುಳುಗೇಳುತ್ತಿದೆ. ಡಿಸೆಂಬರ್ 21ರಿಂದ ಆರಂಭವಾದ ಸುಬ್ರಹ್ಮಣೇಶ್ವರ ಸ್ವಾಮಿಯ ಬ್ರಹ್ಮಕಲಶೋತ್ಸವ ಸಂಭ್ರಮ ಡಿಸೆಂಬರ್ 28ರವೆಗೆ ನಡೆಯಲಿದೆ.
ಇದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸರ್ವೆ ಸುಬ್ರಹ್ಮಣೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮದ ಹಿನ್ನಲೆ. ದುರಸ್ಥಿಯಲ್ಲಿದ್ದ ಸುಬ್ರಹ್ಮಣ್ಯೇಶ್ವರ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಬೇಕೆಂದು ಸರ್ವೆಯ ಊರಿನ ಸಮಸ್ತರು ಎರಡು ವರ್ಷಗಳ ಹಿಂದೆ ನಿರ್ಧರಿಸಿದ್ದರು. ಆದರೆ ದೇವಸ್ಥಾನದ ಕೆಲಸಗಳನ್ನೆಲ್ಲಾ ಊರಿನವರು ಮಾಡಬಹುದು. ಇದಕ್ಕೆ ತಗುಲುವ ಕೋಟಿ ಗಟ್ಟಲೆ ಹಣವನ್ನು ಹೊಂದಿಸೋದು ಹೇಗೆ? ಎಂಬ ಜಿಜ್ಞಾಸೆಗೆ ಊರವರು ಬಿದ್ದಿದ್ದರು. ಈ ಸಮಯದಲ್ಲಿ ಜೀರ್ಣೋದ್ಧಾರ ಸಮಿತಿಗೆ ಮನೆ ಮನೆಗೆ ತೆರಳಿ ದೇವಸ್ಥಾನಕ್ಕೆ ನಿಧಿ ಸಂಗ್ರಹಿಸುವ ವ್ಯವಸ್ಥೆಯನ್ನೂ ಕೈಗೊಳ್ಳಲಾಗದ ಹಿನ್ನಲೆಯಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ದೇಣಿಗೆ ಪಡೆಯಲು ದೇವಸ್ಥಾನ ಸಮಿತಿ ನಿರ್ಧರಿಸಿತ್ತು.
ಸಾಮಾಜಿಕ ಜಾಲತಾಣದ ಮೂಲಕ ದೇವಸ್ಥಾನದ ಭಕ್ತರು ಹಾಗೂ ದಾನಿಗಳನ್ನು ಸಂಪರ್ಕಿಸಲು ನಿರ್ಧರಿಸಿದ ಸಮಿತಿ ಪದಾಧಿಕಾರಿಗಳು ವಾಟ್ಸಪ್ ಮತ್ತು ಫೇಸ್ಬುಕ್ ಮೂಲಕ ಈ ಕಾರ್ಯವನ್ನು ಮಾಡಲು ಮುಂದಾಗಿದ್ದರು. ಇದಕ್ಕಾಗಿ ದೇವಸ್ಥಾನದ ಹೆಸರಿನಲ್ಲಿ ವಾಟ್ಸಪ್ ಗ್ರೂಪ್ ಗಳನ್ನು ರಚಿಸಿ ಈ ಮೂಲಕ 4 ಸಾವಿರಕ್ಕೂ ಮಿಕ್ಕಿದ ಭಕ್ತಾಧಿಗಳನ್ನು ಸಂಪರ್ಕಿಸಲಾಗಿತ್ತು.
ಈ ಸಂಪರ್ಕ ದೇವಸ್ಥಾನದ ಬ್ರಹ್ಮಕಲಶಕ್ಕೆ ಬೇಕಾದ ಅರ್ಧದಷ್ಟು ಹಣವನ್ನು ಸಂಗ್ರಹಿಸುವಲ್ಲಿ ಸಫಲವಾಗಿದೆ. ದೇವಸ್ಥಾನದ ಬಗ್ಗೆ ಏನೂ ತಿಳಿಯದ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಯಾವುದೇ ಸದಸ್ಯರ ಮುಖ ಪರಿಚಯವೂ ಇಲ್ಲದ ಊರ ಹಾಗೂ ಪರವೂರಿನ ದಾನಿಗಳು ಹಾಗು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧನ ಸಹಾಯ ಮಾಡಿದ್ದಾರೆ. ಇದೀಗ ಸುಮಾರು 1.50 ಕೋಟಿಯಷ್ಟು ಹಣವನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಗ್ರಹಿಸಿ, ಸಾಮಾನ್ಯ ಗ್ರಾಮದ ಜನರು ಅಸಾಮಾನ್ಯ ಸಾಧನೆಯನ್ನು ಮಾಡುವ ಮೂಲಕ ಗಮನಸೆಳೆದಿದ್ದಾರೆ.
ಸರ್ವೆ ಸುಬ್ರಹ್ಮಣೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಈ ಸಾಧನೆಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಬಗ್ಗೆ ಮಾತನಾಡಿದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು “ಊರ ದೇವಸ್ಥಾನದ ಮೇಲಿನ ಪ್ರೀತಿಗೆ ಇದು ದ್ಯೋತಕವಾಗಿದೆ. ಸುಬ್ರಹ್ಮಣೇಶ್ವರ ಶಕ್ತಿಯ ಕಾರಣದಿಂದ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ. ಶ್ರೀಮಂತ-ಬಡವ ಬೇಧವಿಲ್ಲದೇ ಭಕ್ತರನ್ನುವ ಏಕ ಮಾತ್ರ ಭಾವದಿಂದ ಗ್ರಾಮಸ್ಥರು ಕೆಲಸ ಮಾಡಿದ್ದಾರೆ” ಎಂದು ಅಭಿಮಾನದಿಂದ ಹೇಳಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಸ್ಥಳೀಯವಾಗಿ ಹೆಚ್ಚಿನ ಸಂಖ್ಯೆಯ ಮರಗಳನ್ನು ಕಡಿಯಲಾಗಿದ್ದು, ಇದಕ್ಕಾಗಿ ಮುಂದಿನ ವನಮಹೋತ್ಸವದಲ್ಲಿ ಒಂದೊಂದು ಗಿಡಗಳನ್ನು ಊರಿನ ಪ್ರತೀ ಮನೆಗೂ ವಿತರಿಸಲು ತೀರ್ಮಾನಿಸಲಾಗಿದೆ. ದೇವಸ್ಥಾನದ ವತಿಯಿಂದ ನೀಡಲಾಗುವ ಈ ಸಸಿಗಳನ್ನು ಬೆಳೆಸುವ ಜವಾಬ್ದಾರಿಯನ್ನು ಪ್ರತಿ ಮನೆ ಮಂದಿಗೆ ನೀಡುವ ಮೂಲಕ ಪರಿಸರವನ್ನೂ ಉಳಿಸುವ ಕಾರ್ಯವನ್ನೂ ಮಾಡಲು ಈ ಸಮಿತಿ ಯೋಜನೆ ಹಾಕಿಕೊಳ್ಳುವ ಮೂಲಕ ಗಮನ ಸೆಳೆದಿದೆ. ಸುಬ್ರಹ್ಮಣೇಶ್ವರ ದೇವಳದ ವತಿಯುಂದಲೇ ಗಿಡಗಳನ್ನು ಕೊಡುವ ಕಾರಣ, ಗ್ರಾಮಸ್ಥರು ಶ್ರದ್ಧಾ ಭಕ್ತಿಯಿಂದ ಮನೆಗೆ ತೆಗೆದುಕೊಂಡು ಹೋಗಿ ಗಿಡವನ್ನು ಸಾಕಿ ಸಲಹುತ್ತಾರೆ ಎನ್ನುವ ವಿಶ್ವಾಸ ದೇವಸ್ಥಾನದ ಸಮಿತಿ ಮುಖಂಡರದ್ದಾಗಿದೆ.
ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥ್ಯ ಕದಡುತ್ತದೆ ಎನ್ನುವ ಆರೋಪದ ನಡುವೆಯೂ, ಈ ಜಾಲತಾಣಗಳಿಂದ ಭಾರೀ ಪ್ರಯೋಜನವಾಗುತ್ತಿದೆ ಎನ್ನುವ ಮೆಚ್ಚುಗೆಯೂ ಇದೆ. ಹಾಗೆಯೇ ಇಲ್ಲಿ ಸಾಮಾಜಿಕ ಜಾಲತಾಣವನ್ನು ಸಕಾರಾತ್ಮಕವಾಗಿ ಬಳಸಿಕೊಂಡಿರುವುದು ಉತ್ತಮ ಉಪಾಯವೇ ಸರಿ. ದೇವಸ್ಥಾನವೊಂದರ ಬ್ರಹ್ಮಕಲಶಕ್ಕೆ ಬೇಕಾಗುವಷ್ಟು ನಿಧಿ ಸಾಮಾಜಿಕ ಜಾಲತಾಣದ ಸಹಾಯದಿಂದ ಸಂಗ್ರಹಿಸುವ ಮೂಲಕ ಬ್ರಹ್ಮಕಲಶ ಸಮಿತಿಯೊಂದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.