ಮಂಗಳೂರು: ಮುಸ್ಲಿಂ ವ್ಯಕ್ತಿಯೊಬ್ಬ ಕ್ರೈಸ್ತ ಯುವತಿಗೆ ಡ್ರಗ್ಸ್ ಚಟ ಹಿಡಿಸಿ, ಗೆಳೆಯರೊಂದಿಗೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಆರೋಪಿ ಸಿದ್ದಿಕ್ ನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕೃಷ್ಣಾಪುರ ನಿವಾಸಿ ಡ್ರಗ್ ಪೆಡ್ಲರ್ ಸಿದ್ದಿಕ್ ಎಂಬಾತ ಕ್ರೈಸ್ತ ಯುವತಿಯನ್ನು ಫುಸಲಾಯಿಸಿದ್ದ. ಈತನ ಮಾತನ್ನು ನಂಬಿದ ಯುವತಿ ಡ್ರಗ್ಸ್ ಚಟಕ್ಕೆ ಬಲಿಯಾಗಿದ್ದಳು. ಹಲವಾರು ದಿನಗಳ ಕಾಲ ಮನೆಯಿಂದ ಆಕೆಯನ್ನು ಕರೆದುಕೊಂಡು ಹೋಗುತ್ತಿದ್ದ ಸಿದ್ದಿಕ್, ಯುವತಿಯನ್ನು ಅಮಲಿನಲ್ಲಿ ತೇಲಿಸಿ ಆತ ಹಾಗೂ ಆತನ ನಾಲ್ವರು ಗೆಳೆಯರು ಸೇರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿಯ ತಾಯಿ ಆರೋಪಿಸಿದ್ದರು. ಸಂತ್ರಸ್ತ ಯುವತಿಯ ರಕ್ಷಣೆಗಾಗಿ ಆಕೆಯ ತಾಯಿ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಮೊರೆ ಹೋಗಿದ್ದರು.
ಯುವತಿ ನಗರದ ಖ್ಯಾತ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ್ದು, ಡ್ರಗ್ಸ್ ಚಟ ಹತ್ತಿಸಿಕೊಂಡಿದ್ದಳು. ಆನಂತರ ಡ್ರಗ್ಸ್ ಇಲ್ಲದೆ ಬದುಕುವುದೇ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಡ್ರಗ್ಸ್ ಚಟಕ್ಕೆ ಬಿದ್ದಿದ್ದಳು. ನಡುರಾತ್ರಿಯಲ್ಲಿ ಬೈಕಿನಲ್ಲಿ ಈ ಯುವಕರು ಯುವತಿಯನ್ನು ಕರೆದೊಯ್ಯುತ್ತಿದ್ದು ಆ ಬಳಿಕ ಹಲವು ದಿನಗಳ ಕಾಲ ಇಟ್ಟುಕೊಳ್ಳುತ್ತಿದ್ದರು ಎಂದು ಯುವತಿಯ ತಾಯಿ ಪೊಲೀಸರಿಗೆ ನೀಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಉರ್ವ ಹಾಗೂ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ನ್ಯಾಯ ಸಿಗದಿದ್ದ ಕಾರಣ ಯುವತಿಯ ತಾಯಿ ಕೊನೆಗೂ ವಿ.ಹಿಂ.ಪ, ಬಜರಂಗದಳದ ಮೊರೆ ಹೋಗಿದ್ದು ಮಗಳನ್ನು ರಕ್ಷಿಸಿಕೊಡಲು ಅಂಗಲಾಚಿದ್ದರು. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡ ವಿಹೆಚ್‌ಪಿ ಆರೋಪಿ ಸಿದ್ದಿಕನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.
ಇದೀಗ ಕೊನೆಗೂ ಆರೋಪಿ ಸಿದ್ದಿಕ್‌ನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರು ಪಡಿಸಿದಾಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.