ಬೆಂಗಳೂರು: ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಒಟ್ಟು ಸ್ಥಾನಗಳಲ್ಲಿ ರಾಜ್ಯಾದ್ಯಾಂತ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಬಿಜೆಪಿ ಎರಡನೇ ಸ್ಥಾನಕ್ಕೆ ಪಡೆದರೆ. ಪಕ್ಷೇತರರು ಮೂರನೇ ಸ್ಥಾನದಲ್ಲಿದ್ದಾರೆ.
ಕರ್ನಾಟಕದ 58 ಪಟ್ಟಣ ಪಂಚಾಯತಿ, ಪುರಸಭೆ ಮತ್ತು ನಗರಸಭೆ ಹಾಗೂ 59 ಗ್ರಾಮ ಪಂಚಾಯತಿಗಳ ಚುನಾವಣೆಯ ಮತ ಎಣಿಕೆ ನಡೆದು ಫಲಿತಾಂಶ ಬಂದಿದೆ. ಆಡಳಿತಾರೂಢ ಬಿಜೆಪಿಗೆ ಈ ಫಲಿತಾಂಶ ಹಿನ್ನಡೆ ಆಗಿದ್ದು ನಿಜ. ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷದ ಚಿಹ್ನೆ ಆಧರಿಸಿ ಚುನಾವಣೆ ನಡೆಯದೇ ಇರುವುದರಿಂದ ಅಲ್ಲಿನ ಫಲಿತಾಂಶದ ಬಗ್ಗೆ ಜನ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ, ವಿಧಾನ ಪರಿಷತ್ತು ಚುನಾವಣೆ ಮತ್ತು ಅದರ ಬೆನ್ನಲ್ಲೇ ನಡೆದ ಆಯ್ದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಫಲಿತಾಂಶ ಕುತೂಹಲ ಕೆರಳಿಸಿದೆ.
ಪಟ್ಟಣ ಪಂಚಾಯತಿ: ಒಟ್ಟು ಸ್ಥಾನಗಳು- 577; ಬಿಜೆಪಿ 194, ಕಾಂಗ್ರೆಸ್ 236, ಜೆಡಿಎಸ್ 12, ಸ್ವತಂತ್ರ 135.
ಪುರಸಭೆ: ಒಟ್ಟು ಸ್ಥಾನಗಳು- 441; ಬಿಜೆಪಿ 176, ಕಾಂಗ್ರೆಸ್ 201, ಜೆಡಿಎಸ್ 21, ಸ್ವತಂತ್ರ 43.
ನಗರಸಭೆ: ಒಟ್ಟು ಸ್ಥಾನಗಳು- 166: ಬಿಜೆಪಿ-67: ಕಾಂಗ್ರೆಸ್-61; ಜೆಡಿಎಸ್-12; ಸ್ವತಂತ್ರ-26
ಎಲ್ಲ ಸ್ಥಾನಗಳನ್ನು ಒಗ್ಗೂಡಿಸಿ, ಪ್ರತಿಯೊಂದು ಪಕ್ಷವೂ ಪಡೆದ ಸ್ಥಾನಗಳನ್ನು ವಿಶ್ಲೇಷಿಸಿದರೆ ಈ ಚುನಾವಣೆ ಸಹ ಈ ಹಿಂದಿನ ವಿಧಾನ ಪರಿಷತ್ತು ಚುನಾವಣೆಯ ಫಲಿತಾಂಶದಂತೆ ಆಡಳಿತಾರೂಢ ಬಿಜೆಪಿಗೆ ಹಿನ್ನಡೆ ಆಗಿದೆ ಎನ್ನುವುದನ್ನೇ ಸೂಚಿಸುತ್ತಿದೆ. ಹಾಗೆಂದು ನಿರ್ಣಯ ಮಾಡಿದರೆ ಅದು ತಪ್ಪಾಗಬಹುದು. ಈ ಮೇಲಿನ ಸಂಖ್ಯೆ ಮತ್ತು ಅವುಗಳ ಸಂಕಲನ ರಾಜಕೀಯ ಅಂಕ ಗಣಿತಕ್ಕೆ ಮೀರಿದ್ದು. ಇಲ್ಲಿ arithmetic depends on political chemistry. ಹಾಗಾದರೆ ಈ ಚುನಾವಣೆಯು ಬಿಜೆಪಿಗೆ ಸಿಹಿ ಸುದ್ದಿ ನೀಡುತ್ತಿದೆಯೇ? ಖಂಡಿತ ಇಲ್ಲ. ಹಾಗೆಂದು ವಿರೋಧ ಪಕ್ಷ ಕಾಂಗ್ರೆಸ್ ಪರವಾಗಿ ಗಾಳಿ ಬೀಸುತ್ತಿದೆಯೇ? ಹಾಗೆ ಹೇಳಲಾಗದಿದ್ದರೂ, ಜನಕ್ಕೆ ಬಿಜೆಪಿ ಸರಕಾರದ ಬಗ್ಗೆ ಸ್ವಲ್ಪ ಪ್ರಶ್ನಾರ್ಥಕ ಚಿಹ್ನೆ ಮೂಡಿರುವ ಭಾವನೆಯನ್ನು ಈ ಫಲಿತಾಂಶ ವ್ಯಕ್ತಪಡಿಸುತ್ತಿದೆ.
ಈ ಚುನಾವಣೆ ನಡೆದಿದ್ದು ಬೇರೆ ಬೇರೆ ಸ್ಥಳೀಯ ವಿಚಾರಗಳ ಮೇಲೆ. ಸ್ಥಳೀಯ ಅಭ್ಯರ್ಥಿ ಮತ್ತು ಅಭ್ಯರ್ಥಿಯ ಮತದಾರನ ಸಂಬಂಧ ಬಹಳ ಮುಖ್ಯವೆನ್ನಿಸುತ್ತದೆ. ಈ ಹಿನ್ನೆಲೆಯಲ್ಲಿ ಇದು 2023 ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಂತ ಹೇಳುವುದಕ್ಕೆ ಆಗಲ್ಲ. ಜೆಡಿಎಸ್ ನಾಯಕರು ಏನೇ ಹೇಳಬಹುದು—ಮಿಶನ್ 123 ಏನೇ ಹೇಳಲಿ, ಆ ಪಕ್ಷ ಈಗ ಆಟಕ್ಕುಂಟು ಲೆಕ್ಕಕ್ಕಿಲ್ಲ. ಮುಂದಿನ ಚುನಾವಣೆ ಹೊತ್ತಿಗೆ ಆ ಪಕ್ಷದ ಮುಂದೆ ಅಸ್ತಿತ್ವದ ಸವಾಲು ಬಂದು ನಿಲ್ಲಬಹುದು. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಆಡಳಿತಾರೂಢ ಬಿಜೆಪಿಯಲ್ಲಿ ಆತಂಕ ತಂದಿದ್ದರೆ, ಸ್ವಲ್ಪ ಮುನ್ನಡೆ ಸಾಧಿಸಿರುವುದು ಕಾಂಗ್ರೆಸ್ನಲ್ಲಿ ಮುಂದಿನ ಚುನಾವಣೆ ಸಿದ್ಧತೆಯ ಹುರುಪು ಹೆಚ್ಚಿಸಿದೆ..



























