ಬೆಂಗಳೂರು: ಆತ್ಮಗಳ ಜೊತೆಯಲ್ಲಿ ಮಾತನಾಡುತ್ತೇನೆ ಎಂದು ಬಾಲಕಿಯೊಬ್ಬಳು ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದು, ಆಕೆಯನ್ನು ಪತ್ತೆ ಹಚ್ಚಿಕೊಡುವಂತೆ ಆಕೆಯ ಪೋಷಕರು ಸಾಮಾಜಿಕ ಜಾಲತಾಣ ಮೂಲಕ ಮನವಿ ಮಾಡಿದ್ದಾರೆ.
ಸುಬ್ರಹ್ಮಣ್ಯನಗರದಲ್ಲಿ ಪೋಷಕರ ಜತೆ ವಾಸವಿದ್ದ 17 ವರ್ಷದ ಅನುಷ್ಕಾ, ಈ ಅ.31ರಂದು ಮನೆಯಿಂದ ಕಾಣೆಯಾಗಿದ್ದಳು. ಈ ಸಂಬಂಧ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಇದ್ದ ಒಬ್ಬಳೇ ಮಗಳು ಮನೆಬಿಟ್ಟು ಹೋಗಿ ಎರಡು ತಿಂಗಳಾದರೂ ಆಕೆಯ ಸುಳಿವು ಸಿಕ್ಕಿಲ್ಲ. ಅದರಿಂದ ಅಸಹಾಯಕರಾಗಿರುವ ಅವರು ಈಗ ಟ್ವಿಟರ್ ಮೂಲಕ ಮನವಿ ಮಾಡಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣಳಾಗಿದ್ದ ಆಕೆ, ಎರಡು ಜತೆ ಬಟ್ಟೆ ಹಾಗೂ 2,500 ರೂ. ತೆಗೆದುಕೊಂಡು ಮನೆಬಿಟ್ಟು ಹೋಗಿದ್ದು ಇನ್ನೂ ಪತ್ತೆಯಾಗಿಲ್ಲ. ಆಕೆಯ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಮನೆಗೆ ಬಂದೊಡನೆಯೇ ಕೊಠಡಿಯೊಳಗೆ ಸೇರಿಕೊಳ್ಳುತ್ತಿದ್ದಳು. ಏಕಾಂತದಲ್ಲೇ ಇರುತ್ತಿದ್ದಳು. ಯಾವ ವಿಚಾರವನ್ನೂ ನಮ್ಮೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ. ಇದರಿಂದ ಗಾಬರಿಗೊಂಡು ಆಕೆಯನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮನೋವೈದ್ಯರ ಬಳಿ ಕರೆದುಕೊಂಡು ಹೋಗಿದ್ದೆವು ಎಂದು ಅನುಷ್ಕಾ ತಂದೆ ಅಭಿಷೇಕ್ ತಿಳಿಸಿದ್ದಾರೆ.