ಉಪ್ಪಿನಂಗಡಿ: ತಲವಾರು ದಾಳಿ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಪಡಿಸಿಕೊಂಡಿದ್ದ ಪಿಎಫ್ ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಡಿ.14ರಂದು ನಡೆದ ಪ್ರತಿಭಟನೆಯ ಸಂದರ್ಭ ನಡೆದ ಘಟನಾವಳಿಗಳಿಗೆ
ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣಾ ಉಪ ನಿರೀಕ್ಷಕ ಪ್ರಸನ್ನ ಕುಮಾರ್ ಕೊಲೆಯತ್ನ ಸೇರಿದಂತೆ ಇನ್ನಿತರ ಕಲಂನಡಿ ನೀಡಿರುವ ದೂರಿಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನೆಲ್ಯಾಡಿಯ ಹೊಸಮಜಲಿನ ಜಾಫರ್ ಹಾಗೂ ಕೋಲ್ಪೆಯ ಮಹಮ್ಮದ್ ಆರೀಫ್ ಹುಸೇನ್ ಎನ್ನಲಾಗಿದೆ.
ಇವರನ್ನು ಡಿ.30 ರಂದು ಪೊಲೀಸರು ನೆಲ್ಯಾಡಿಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಡಿ.14 ರಂದು ನಡೆದ ಘಟನೆಗೆ ಸಂಬಂಧಿಸಿ ದೂರು ನೀಡಿರುವ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಪ್ರಸನ್ನ ಕುಮಾರ್, ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದ ಪಿಎಫ್‌ಐ ಮುಖಂಡರನ್ನು ಬಿಡುಗಡೆಗೊಳಿಸಬೇಕೆಂದು ಒತ್ತಾಯಿಸಿದ್ದ ಗುಂಪು ಪೊಲೀಸರ ಮೇಲೆ ಹಲ್ಲೆ ನಡೆಸಿ, ಠಾಣೆಯೊಳಗೆ ನುಗ್ಗಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸನ್ನಿವೇಶ ಅರಿತು ರಾತ್ರಿ 9:30ರ ಸುಮಾರಿಗೆ ಅವರನ್ನು ಚದುರಿಸಲು ನಾನು ಸೇರಿದಂತೆ, ಬಂದೋಬಸ್ತ್ ನಲ್ಲಿ ನಿರತರಾಗಿದ್ದ ಇತರರು ತೆರಳಿದಾಗ ಮೊದಲೇ ಪಿತೂರಿ ನಡೆಸಿ ತಂದಿರಿಸಿದ್ದ
ಮಾರಕಾಯುಧಗಳಾದ ಸೋಡಾ ಬಾಟಲಿ ಗಳನ್ನು ಆ್ಯಂಬುಲೆನ್ಸ್ ವಾಹನದಿಂದ ತೆಗೆದು ಪೊಲೀಸರ
ಮೇಲೆಯೇ ಗುಂಪಲ್ಲಿದ್ದವರು ದಾಳಿ ನಡೆಸಿದ್ದರು.
ಈ ಸಂದರ್ಭ ಓರ್ವ ವ್ಯಕ್ತಿಯು ನನ್ನನ್ನು ಕೊಲೆ
ಮಾಡುವ ಉದ್ದೇಶದಿಂದ ಚೂರಿಯಿಂದ ನನ್ನ ಹೊಟ್ಟೆಗೆ ತಿವಿಯಲು ಬಂದಿದ್ದು, ಅದನ್ನು ನಾನು ತಡೆದಿದ್ದರಿಂದ ನನ್ನ ಅಂಗೈಗೆ ಗಾಯವಾಗಿದೆ. ಅಲ್ಲದೇ, ಡಿವೈಎಸ್ಪಿಯವರ ಮೇಲೆಯೂ ಕಲ್ಲು ತೂರಾಟ ನಡೆಸಿದ್ದಾರೆ. ಆಗ ಆತ್ಮರಕ್ಷಣೆಗಾಗಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಗುಂಪು ಸೇರಿದ್ದ ಜನರು ಸ್ಥಳದಿಂದ ಒಮ್ಮೆಲೆ ಒಬ್ಬರ ಮೇಲೊಬ್ಬರಂತೆ ಬಿದ್ದು ಓಡುತ್ತಾ ಮಸೀದಿಯ ಕಂಪೌಂಡ್ ಗೋಡೆ ಹಾರಲು ಯತ್ನಿಸುತ್ತಾ ಮಸೀದಿಯೊಳಗೆ ಹೋಗಿರುವುದಲ್ಲದೆ, ಪೊಲೀಸರ ಮೇಲೆ ಕಲ್ಲು ಸೋಡಾ ಬಾಟಲ್ ಗಳನ್ನು ತೂರಿದ್ದಾರೆ. ಅಲ್ಲದೇ, ಪೊಲೀಸ್ ವಾಹನಕ್ಕೆ, ಇಲಾಖಾ ಸೊತ್ತಿಗೆ ಹಾನಿಗೊಳಿಸಿ, ಸುಮಾರು 25 ಸಾವಿರ ರೂ. ನಷ್ಟವುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಕಲಂ 143,147,148,332, 504,427, 353, 307 ಜೊತೆಗೆ 149 ಭಾದಂಸಂ ಮತ್ತು ಕಲಂ 2(ಎ) ಕೆಪಿಡಿಎಲ್ಟಿ ಆಕ್ಟ್ ನಡಿ ಪ್ರಕರಣ ದಾಖಲಾಗಿತ್ತು.