ಮಂಗಳೂರು: ಕರ್ತವ್ಯಲೋಪ ಎಸಗಿದ ಆರೋಪದಲ್ಲಿ ಮಹಿಳಾ ಪೊಲೀಸ್ ಠಾಣೆಯ ಎಸ್.ಐ. ಸಹಿತ ಆರು ಮಂದಿ ಪೊಲೀಸರನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅಮಾನತು ಮಾಡಿದ್ದಾರೆ.
ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆ ಎಸ್.ಐ. ರೋಸಮ್ಮ ಅವರನ್ನು ಅಮಾನತು ಮಾಡಲಾಗಿದೆ.
ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ಬಂದಾಗ ಎಸ್.ಐ. ರೋಸಮ್ಮ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಮಹಿಳಾ ಠಾಣೆಯ ಐವರು ಸಿಬ್ಬಂದಿಯು ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ಮದ್ಯಪಾನ ಮಾಡಿ ಇಲಾಖೆಯ ನಿಯಮಾವಳಿಗೆ ವಿರುದ್ಧವಾಗಿ ವರ್ತಿಸಿದ್ದರು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಹಾಗೂ ಡಿಸಿಪಿ ಮತ್ತು ಎಸಿಪಿ ನೀಡಿದ ವರದಿಯನ್ನು ಆಧರಿಸಿ ಇಬ್ಬರು ಎ.ಎಸ್.ಐ., ಇಬ್ಬರು ಹೆಡ್‌ಕಾನ್ಸ್‌ಟೇಬಲ್, ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಸಹಿತ ಐವರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.
ಠಾಣೆಯಲ್ಲೇ ಡ್ಯಾನ್ಸ್: ಸ್ಪಷ್ಟನೆ ನೀಡಿದ ಆಯುಕ್ತರು
ಮಂಗಳೂರು ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಸಹಿತ ಪೊಲೀಸರು ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ಮಾಡಿದ್ದಾರೆನ್ನಲಾದ ಬ್ರೇಕ್ ಡ್ಯಾನ್ಸ್ ವೀಡಿಯೋ ಭಾರೀ ವೈರಲ್ ಆಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ಕಳೆದ ದಸರಾ ಹಬ್ಬದ ಸಂದರ್ಭ ಹುಲಿವೇಷ ಸಹಿತ ಇತರ ಕಲಾತಂಡದೊಂದಿಗೆ ಸಂಭ್ರಮಾಚರಣೆಯ ವೀಡಿಯೋ ಆಗಿದೆ.
ಈ ಸಂಭ್ರಮಾಚರಣೆಯಲ್ಲಿ ಠಾಣೆಗಳ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು. ಇದನ್ನು ಇಲಾಖೆಯ ಸೂಚನೆಯ ಮೇರೆಗೆ ಮಾಡಲಾಗಿತ್ತು. ಈ ಬಗ್ಗೆ ಯಾವುದೇ ಶಿಸ್ತಿನ ಕ್ರಮ ಜರಗಿಸಿಲ್ಲ ಎಂದಿದ್ದಾರೆ.