ಬೆಳ್ತಂಗಡಿ: ವ್ಯಕ್ತಿಯೊಬ್ಬರು ದ್ವಿಚಕ್ರ ವಾಹನದಲ್ಲಿ ಸಾಗುತ್ತಿರುವಾಗ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ರಸ್ತೆಗೆಸೆಯಲ್ಪಟ್ಟು ದಾರುಣವಾಗಿ ಮೃತಪಟ್ಟ ಘಟನೆ ಕಾಜೂರು ದಿಡುಪೆ ಸಂಸೆ ರಸ್ತೆಯ ಹೇಡ್ಯ ಸೊಸೈಟಿ ಬಳಿ ಡಿ.06 ರ ತಡರಾತ್ರಿ ನಡೆದಿದೆ.
ಮೃತರನ್ನು ಕೊಯ್ಯುರು ನಿವಾಸಿ ರಘು ಎಂದು ಗುರುತಿಸಲಾಗಿದೆ.
ವಿದ್ಯುತ್ ಕಂಬಕ್ಕೆ ಹುಲ್ಲು ಸಾಗಾಟದ ಪಿಕಪ್ ವಾಹನ ಡಿಕ್ಕಿಯಾದ ಪರಿಣಾಮ ನಾಲ್ಕೈದು ವಿದ್ಯುತ್ ಕಂಬಗಳು ತುಂಡಾಗಿ ತಂತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿತ್ತು.
ಈ ವೇಳೆ ಇದರ ಅರಿವಿಲ್ಲದೆ ಸ್ಕೂಟರ್ ನಲ್ಲಿ ದಿಡುಪೆ ಕಡೆಯಿಂದ ಬರುತ್ತಿದ್ದ ಉಜಿರೆ ಕಾಲೇಜು ರಸ್ತೆಯ ಹೋಟೆಲ್ ಮಂಜುನಾಥ್ ನ ರಘು ಅವರ ಕುತ್ತಿಗೆಗೆ ತಂತಿಗಳು ಸಿಕ್ಕಿಕೊಂಡು ರಸ್ತೆಗೆಸೆಯಲ್ಪಟ್ಟ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಅಪಘಾತದ ವೇಳೆ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತೇ ಎಂಬ ನಿಖರ ಮಾಹಿತಿ ಲಭಿಸಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.