ವಿಟ್ಲ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಹೊರಡಿಸಿದ ವಾರಾಂತ್ಯ ಕರ್ಫ್ಯೂ ವಿಟ್ಲದಲ್ಲಿ ಭಾಗಶ: ಯಶಸ್ವಿಯಾಗಿದೆ.
ಜನ ಮತ್ತು ವಾಹನ ಸಂಚಾರ ಎಂದಿನಂತಿದ್ದು, ವಿಟ್ಲ ಪೇಟೆಯಲ್ಲಿ ಬೆಳಿಗ್ಗೆ ನಿಂದಲೇ ಎಲ್ಲಾ ಅಂಗಡಿಗಳ ಮಾಲಕರು ಬಾಗಿಲು ತೆರೆದು ವ್ಯಾಪಾರ ಮಾಡುತ್ತಿದ್ದರು. 11 ಗಂಟೆ ಬಳಿಕ ವಿಟ್ಲ ಪೊಲೀಸರು ಪೇಟೆಗೆ ಆಗಮಿಸಿ, ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ, ಉಳಿದೆಲ್ಲ ಅಂಗಡಿಗಳನ್ನು ಬಂದ್ ಮಾಡಿಸಿದರು.
ಬಸ್, ಕಾರು, ಆಟೋ ರಿಕ್ಷಾ ಮತ್ತು ಇನ್ನಿತರ ಖಾಸಗಿ ವಾಹನಗಳ ಸಂಚಾರ ಎಂದಿನಂತಿದೆ. ಅಗತ್ಯ ವಸ್ತುಗಳಾದ ತರಕಾರಿ, ಹಾಲು, ದಿನಸಿ, ಮೆಡಿಕಲ್ ವ್ಯಾಪಾರ ಮಾಡುತ್ತಿದ್ದು, ಹೆಚ್ಚಿನ ಜನರು ಆಗಮಿಸಿ ವಸ್ತುಗಳನ್ನು ಖರೀದಿಸಿದರು.
ಪೊಲೀಸರು ಪೇಟೆಯಿಂದ ನಿರ್ಗಮಿಸಿದ ಬಳಿಕ ಕೆಲ ಬೆರಳೆಣಿಕೆಯಷ್ಟು ಅಂಗಡಿಗಳು ಅರ್ಧ ಬಾಗಿಲು ಹಾಕಿದ್ದು, ಇನ್ನೂ ಕೆಲವರು ಸಂಪೂರ್ಣವಾಗಿ ಬಾಗಿಲು ತೆರೆದು ವ್ಯಾಪಾರ ಮಾಡುತ್ತಿರುವ ದೃಶ್ಯ ಕಂಡು ಬಂದಿತು.