ಬಹುಭಾಷಾ ನಟಿ ಭಾವನಾ ಮೆನನ್ ಅವರು 2017, ಫೆಬ್ರವರಿಯಲ್ಲಿ ತಮ್ಮ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಮೌನ ಮುರಿದ್ದಾರೆ. ಕೇರಳದ ತ್ರಿಶೂರ್ನಿಂದ ಶೂಟಿಂಗ್ ಮುಗಿಸಿಕೊಂಡು ಕೊಚ್ಚಿ ಕಡೆಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಭಾವನಾ ಅವರನ್ನು ಅಪಹರಿಸಿ ಎರಡು ಗಂಟೆಗಳ ಕಾಲ ಲೈಂಗಿಕ ಕಿರುಕುಳ ನೀಡಲಾಗಿತ್ತು ಅನ್ನೋ ಆರೋಪ ಕೇಳಿಬಂದಿತ್ತು.
ಈ ಸಂಬಂಧ ಭಾವನಾ ಮಲಯಾಲಂ ನಟ ದಿಲೀಪ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಘಟನೆ ನಡೆದು ಐದು ವರ್ಷಗಳು ಕಳೆದಿದ್ದು, ಭಾವನಾ ಮತ್ತೆ ಈ ಘಟನೆಯನ್ನು ನೆನಪಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಮೌನ ಮುರಿದ್ದಾರೆ. ಆದರೆ ಇಲ್ಲಿ ಭಾವನಾ ಯಾರ ಹೆಸರನ್ನು ಉಲ್ಲೇಖಿಸದೆ ಘಟನೆ ಬಗ್ಗೆ ಮಾತನಾಡಿದ್ದಾರೆ.
“ಅದು ಸುಲಭದ ಪ್ರಯಾಣ ಆಗಿರಲಿಲ್ಲ. ಬಲಿಪಶು ಆದ ನಂತರ ಬದುಕುಳಿಯುವವರೆಗಿನ ಪ್ರಯಾಣ ಅದಾಗಿತ್ತು. ನಾನು ಯಾವುದೇ ಅಪರಾಧ ಮಾಡದೇ ಇದ್ದರೂ, ನನ್ನನ್ನು ಅವಮಾನಿಸುವ, ನನ್ನ ಧ್ವನಿಯನ್ನು ಅಡಗಿಸುವ ಅನೇಕ ಪ್ರಯತ್ನಗಳು ನಡೆದಿವೆ. ಆಗ ನನ್ನ ಧ್ವನಿಯನ್ನು ಜೀವಂತವಾಗಿಡಲು ಕೆಲವರು ಮುಂದಾದರು. ಈಗ ಅನೇಕ ಧ್ವನಿಗಳು ನನ್ನ ಪರವಾಗಿ ಮಾತನಾಡುತ್ತಿವೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಈ ವೇಳೆ ನಾನು ಒಬ್ಬಂಟಿ ಆಗಿಲ್ಲ” ಎಂದು ಭಾವನಾ ಬರೆದುಕೊಂಡಿದ್ದಾರೆ.