ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಟ್ಟಡ ಮತ್ತು ಏಳ್ಮುಡಿಯಲ್ಲಿ ತಿಂಗಳ ಹಿಂದೆ ನಿಲ್ಲಿಸಲಾಗಿದ್ದ ಆಟೋ ರಿಕ್ಷಾಗಳಿಂದ ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪುತ್ತೂರು ಪೊಲೀಸರು ಜ.10ರಂದು ರಾತ್ರಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ಕೆಮ್ಮಿಂಜೆ ನಿವಾಸಿ ಮಹಮ್ಮದ್ ಸಾಲಿಕ್ ಎನ್ನಲಾಗಿದೆ.
ಡಿ.9 ರಂದು ಏಳ್ಮುಡಿಯಲ್ಲಿ ರಾಮ್‌ರಾಜ್ ಸಂಸ್ಥೆಯ ಮುಂದೆ ನಿಲ್ಲಿಸಿದ್ದ ಆಟೋ ರಿಕ್ಷಾದಿಂದ ಸಾವಿರಾರು ರೂ. ನಗದು ಕಳವಾಗಿತ್ತು. ಡಿ.31 ರಂದು ಎಪಿಎಂಸಿ ರಸ್ತೆ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನ ಆಟೋ ರಿಕ್ಷಾ ದುರಸ್ಥಿ ಕೇಂದ್ರದ ಬಳಿ ನಿಲ್ಲಿಸಲಾಗಿದ್ದ ರಿಕ್ಷಾದಿಂದ ರೂ. 14,600 ಕಳವಾಗಿತ್ತು. ಈ ಎರಡು ಕೃತ್ಯವು ಬೈಕ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕಳವು ಮಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ಕಳವಿಗೆ ಸಂಬಂಧಿಸಿ ಏಳ್ಮುಡಿಯಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾದ ಚಾಲಕ ರಾಕೇಶ್ ರೈ ಪರ್ಪುಂಜ ಮತ್ತು ಕ್ರಿಸ್ತೋಫರ್ ಬಿಲ್ಡಿಂಗ್‌ನಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾದ ಚಾಲಕ ಚಿರಂಜೀವಿ ಬೆಳ್ಳಾರೆ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಂಧಿತ ಆರೋಪಿಯನ್ನು ಜ.11 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.



























