ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ನಡುವೆ ಕರ್ನಾಟಕ ಸರ್ಕಾರವು ಜ.11 ರಂದು ರಾತ್ರಿ ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ವಿಧಿಸಿದೆ. ರಾಜ್ಯದಾದ್ಯಂತ ಎಲ್ಲಾ ರೀತಿಯ ಧರಣಿಗಳು ಮತ್ತು ಪ್ರತಿಭಟನೆಗಳನ್ನು ನಿಷೇಧಿಸಿದೆ. ಇನ್ನು ನಿರ್ಬಂಧಗಳು ಜನವರಿ 31ರವರೆಗೆ ಮುಂದುವರಿಕೆ ಆಗಲಿದೆ.
ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ ರಾಜ್ಯ ಸರ್ಕಾರ, ಮದುವೆ ಕಾರ್ಯಕ್ರಮಗಳನ್ನು 200 ಕ್ಕಿಂತ ಹೆಚ್ಚು ಜನರು ತೆರೆದ ಜಾಗದಲ್ಲಿ ಮತ್ತು 100 ಜನರೊಂದಿಗೆ ಮುಚ್ಚಿದ ಸ್ಥಳಗಳಲ್ಲಿ ನಡೆಸಲು ಅವಕಾಶ ನೀಡಿದೆ. ಮಹಾರಾಷ್ಟ್ರ, ಕೇರಳ ಮತ್ತು ಗೋವಾ ಗಡಿಗಳಲ್ಲಿ ಕಣ್ಗಾವಲು ತೀವ್ರಗೊಳಿಸಿದೆ.
ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಪರಿಸ್ಥಿತಿಯ ಮೌಲ್ಯಮಾಪನದ ಆಧಾರದ ಮೇಲೆ ಹೆಚ್ಚುವರಿ ಕ್ರಮಗಳನ್ನು ವಿಧಿಸಬಹುದು ಎಂದು ರಾಜ್ಯ ಸರ್ಕಾರವು ಸೇರಿಸಿದೆ. ಕಡಿಮೆ ಪಾಸಿಟಿವಿಟಿ ಇರುವ ಪ್ರದೇಶದಲ್ಲಿ ನಿರ್ಬಂಧಗಳನ್ನು ಸಡಿಲಿಸುವುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಳ್ಳಿಹಾಕಿದ ಒಂದು ದಿನದ ನಂತರ ಈ ಬೆಳವಣಿಗೆಯು ಬಂದಿದೆ. ಬದಲಿಗೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಬಸವರಾಜ ಬೊಮ್ಮಾಯಿ ಒತ್ತಿ ಹೇಳಿದ್ದಾರೆ.
ಕರ್ನಾಟಕ ಸರ್ಕಾರವು ಜನವರಿ 4 ರಂದು ವಾರಾಂತ್ಯದಲ್ಲಿ ಕರ್ಫ್ಯೂ ವಿಧಿಸಿದೆ ಮತ್ತು ಜನವರಿ 19 ರವರೆಗೆ ಸಾರ್ವಜನಿಕ ಸಭೆಗಳನ್ನು ನಿರ್ಬಂಧಿಸಿದೆ. ರಾತ್ರಿ ಕರ್ಫ್ಯೂ ಅನ್ನು ಇನ್ನೂ ಎರಡು ವಾರಗಳವರೆಗೆ ಮುಂದುವರಿಸಲು ನಿರ್ಧರಿಸಿದೆ. ಎಲ್ಲಾ ಧರಣಿಗಳು, ಪ್ರತಿಭಟನೆಗಳು ಇತ್ಯಾದಿಗಳನ್ನು ನಿಷೇಧಿಸಲಾಗಿದೆ.


























