ಪುತ್ತೂರು: ಗ್ರಾಮಾಂತರ ಠಾಣಾ ವ್ಯಾಪ್ತಿಯ ಉದ್ಯಮಿಯೋರ್ವರಿಗೆ ಕರೆ ಮಾಡಿ ಜೀವ ಬೆದರಿಕೆಯೊಡ್ಡಿ, ಹಣ ವಸೂಲಿ ಮಾಡಿದ ಇಬ್ಬರು ರೌಡಿ ಶೀಟರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಬಂಟ್ವಾಳ ತಾಲೂಕಿನ ಕಲ್ಲಡ್ಕ ಮಸೀದಿ ಬಳಿಯ ನಿವಾಸಿ ಕಲಂದರ್ ಶರೀಫ್ ಮತ್ತು ಮಂಗಳೂರು ತಾಲೂಕಿನ ಮಂಜನಾಡಿ ಕುಚ್ಚಿಗುಡ್ಡೆ ನಿವಾಸಿ ಹಸನಬ್ಬ ಎನ್ನಲಾಗಿದೆ.
ಶರೀಫ್ ಮತ್ತು ಹಸನಬ್ಬ ಪುತ್ತೂರಿನ ಉದ್ಯಮಿಯೋರ್ವರಿಗೆ ಕರೆ ಮಾಡಿ “ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ ಅವನನ್ನು ಬಿಡಿಸಲು 13,00,000 ರೂ. ತಗಲುತ್ತದೆ. ಅವನನ್ನು ಬಿಡಿಸಲು ನೀನು ಹಣ ಕೊಡಬೇಕು, ಎರಡು ದಿನಗಳೊಳಗೆ 3,50,000 ಹಣ ರೆಡಿ ಮಾಡಬೇಕು. ಇಲ್ಲದಿದ್ದರೆ ನಿನ್ನನ್ನು ಮತ್ತು ನಿನ್ನ ಮಕ್ಕಳನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಸಿದ್ದು, ಅಷ್ಟೇ ಅಲ್ಲದೇ ಈ ವಿಷಯ ಬೇರೆ ಯಾರಿಗಾದರೂ ತಿಳಿಸಿದರೇ ನಿನ್ನ ಹೆಣ ಬೀಳುತ್ತದೆ., ನೀನು ಜೀವಂತ ಬದುಕಲು ಸಾಧ್ಯವಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ. 03/2022 ಕಲಂ: 504, 506, 507,387 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ್ ಸೋನಾವಣೆ ಮತ್ತು ಪುತ್ತೂರು ಉಪ ವಿಭಾಗ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್ ರವರ ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಗೆ ರವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರುಗಳಾದ ಉದಯರವಿ ಎಂ. ವೈ, ಅಮೀನ್ ಸಾಬ್, ಹಾಗೂ ಸಿಬ್ಬಂದಿಗಳಾದ ಕೃಷ್ಣಪ್ಪ, ದೇವರಾಜ್, ಅದ್ರಾಮ, ಪ್ರವೀಣ್ ರೈ, ಹರ್ಷಿತ್, ಗಾಯತ್ರಿ, ವಿನೋದ್ ಭಾಗವಹಿಸಿದ್ದರು.