ಪುತ್ತೂರು: ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಸ್ತಬ್ಧಚಿತ್ರಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿ ಪುತ್ತೂರಿನ ಬಿಲ್ಲವ ಸಮಾಜದ ಬಾಂಧವರಿಂದ ಸಹಾಯಕ ಆಯುಕ್ತರ ಕಛೇರಿ ಮೂಲಕ ಪ್ರಧಾನಮಂತ್ರಿಯವರಿಗೆ ಜ.17 ರಂದು ಮನವಿ ಸಲ್ಲಿಸಲಾಯಿತು.
ಜ.26 ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾಗವಹಿಸಲು ಕೇರಳ ಸರಕಾರ ಕಳುಹಿಸಿಕೊಟ್ಟಿದ್ದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಸಂದೇಶ ಸಾರುವ ಸ್ತಬ್ಧಚಿತ್ರಕ್ಕೆ ಕೇಂದ್ರ ಸರಕಾರ ಅವಕಾಶ ನಿರಾಕರಿಸಿರುವುದು ನಮಗೆ ಆಘಾತ ತಂದಿದ್ದು, ಕೇರಳದಲ್ಲಿ ಹುಟ್ಟಿ ಸಾಮಾಜಿಕ ಅಸಮಾನತೆ, ಮೇಲು ಕೀಳು ತಾರತಮ್ಯ, ಅಸ್ಪೃಷ್ಯತೆಯ ವಿರುದ್ಧ ಹೋರಾಟ ರೂಪಿಸಿ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸಂದೇಶದ ಮೂಲಕ ಸರ್ವರೂ ಸಮಾನರು ಎಂದು ಸಾರಿದ್ದ ಕ್ರಾಂತಿಕಾರಿ ಸಂತ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ.
ಸ್ವತಃ ದೇವಾಲಯಗಳನ್ನು ನಿರ್ಮಿಸಿ ಮೂಢ ನಂಬಿಕೆಗಳನ್ನು, ತೊಲಗಿಸಲು ಪಣ ತೊಟ್ಟಿದ್ದ ನಾರಾಯಣ ಗುರುಸ್ವಾಮಿಗಳು ಸರ್ವ ಧರ್ಮೀಯರಿಂದ, ಸರ್ವ ಜಾತಿಯವರಿಂದ ಗೌರವಿಸಲ್ಪಡುವುದು ಅಭಿಮಾನದ ಸಂಗತಿಯಾಗಿದೆ.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ತತ್ವಗಳು ದೇಶ ಮಾತ್ರವಲ್ಲದೆ ವಿದೇಶದಲ್ಲಿಯೂ ಗೌರವಿಸಲ್ಪಡುತ್ತಿದೆ. ಕೋಟ್ಯಾಂತರ ಮಂದಿಯಿಂದ ಆರಾಧಿಸಲ್ಪಡುವ ನಾರಾಯಣ ಗುರುಸ್ವಾಮಿಯವರ ಸಂದೇಶ ಸಾರುವ ಸ್ತಬ್ಧಚಿತ್ರವನ್ನು ಕೇರಳ ಸರಕಾರ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಕಳುಹಿಸಿಕೊಟ್ಟಿರುವುದು ಸ್ವಾಗತಾರ್ಹವಾಗಿದೆ. ಆದರೆ, ಈ ಸ್ತಬ್ಧಚಿತ್ರಕ್ಕೆ ಪಥಸಂಚಲನದಲ್ಲಿ ಭಾಗವಹಿಸಲು ಭಾರತ ಸರಕಾರ ಅವಕಾಶ ನಿರಾಕರಿಸಿದೆ ಎಂಬುದನ್ನು ನಂಬಲು ನಮಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವುಗಳು ತಮ್ಮ ನಿರ್ಧಾರವನ್ನು ವಾಪಸ್ ಪಡೆದುಕೊಂಡು ಗಣರಾಜ್ಯೋತ್ಸವದ ಪರೇಡಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯವರ ಸ್ತಬ್ಧಚಿತ್ರ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕೋಡಿಂಬಾಡಿ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಬಿಲ್ಲವ ಸಂಘ ವಲಯ ಸಂಚಾಲಕ ಕಿರಣ್ ಬಸಂತಕೋಡಿ, ಆರ್ಯಾಪು ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಸಂಪ್ಯ, ಕುಂಡಡ್ಕ ಬಿಲ್ಲವ ಸಂಘ ಕಟ್ಟಡ ಸಮಿತಿಯ ಕಾರ್ಯದರ್ಶಿ ಮೋಹನ ಗುರ್ಜಿನಡ್ಕ, ಬಲ್ನಾಡು ಬಿಲ್ಲವ ಗ್ರಾಮಸಮಿತಿ ಅಧ್ಯಕ್ಷ ಚಂದ್ರಶೇಖರ ಕೆ, ನಿಡ್ಪಳ್ಳಿ ಬಿಲ್ಲವ ಗ್ರಾಮ ಸಮಿತಿ ಗೌರವಾಧ್ಯಕ್ಷ ಹರೀಶ್ ಕೋಟ್ಯಾನ್, ಚಿಕ್ಕಮುಡ್ನೂರು ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಅಣ್ಣಿಪೂಜಾರಿ, ಕೋಡಿಂಬಾಡಿ ಬಿಲ್ಲವ ಗ್ರಾಮ ಸಮಿತಿಯ ಕಾರ್ಯದರ್ಶಿ ವಿಜಯ್ ಕುಮಾರ್ ಚೀಮುಳ್ಳು ಉಪಸ್ಥಿತರಿದ್ದರು.