ಪುತ್ತೂರು: ಗಣರಾಜ್ಯೋತ್ಸವಕ್ಕೆ ಕೇರಳ ಸರ್ಕಾರ ಕಳುಹಿಸಿದ್ದ ನಾರಾಯಣ ಗುರು ಸ್ತಬ್ದಚಿತ್ರ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ತಿರಸ್ಕರಿಸಿದ್ದಕ್ಕಾಗಿ ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.
ಈ ಬಗ್ಗೆ ಮಾತನಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ ಯವರು, ‘ಶ್ರೇಷ್ಠ ಸಮಾಜ ಸುಧಾರಕ ಸಂತ, ವಿಶ್ವದಲ್ಲಿ ಖ್ಯಾತಿಯನ್ನು ಪಡೆದಂತಹ ನಾರಾಯಣ ಗುರು ಸ್ವಾಮಿಯವರ ಸ್ತಬ್ದಚಿತ್ರವನ್ನು ಕೇಂದ್ರ ಸರ್ಕಾರ ವಿನಃ ಕಾರಣ ತೆಗೆದು ಹಾಕಿದ್ದು, ನ್ಯಾಯ ಸಮ್ಮತವಲ್ಲ, ಗಣರಾಜ್ಯೋತ್ಸವದ ದಿನದಂದು ವಿವಿಧ ರಾಜ್ಯಗಳ ಹೆಗ್ಗಳಿಕೆಯ ಸ್ತಬ್ದಚಿತ್ರವನ್ನು ಪ್ರಸ್ತುತ ಪಡಿಸುವಂತಹ ಮತ್ತು ಗೌರವದಿಂದ ಕಾಣುವಂತಹ ದಿನ. ಈ ನಿಟ್ಟಿನಲ್ಲಿ ಕೇರಳ ಸರಕಾರ ನಾಳಿದ್ದು ನಡೆಯುವ 75ನೇ ವರ್ಷದ ಅಮೃತ ಮಹೋತ್ಸವದ ಗಣರಾಜ್ಯೋತ್ಸವದ ದಿನದಂದು ಜಟಾಯು ಬಂಡೆಯನ್ನು ಬಿಂಬಿಸುವ ಮತ್ತು ಮಹಿಳಾ ಸಬಲೀಕರಣ ಮತ್ತು ಪ್ರವಾಸೋದ್ಯಮವನ್ನು ಬಿಂಬಿಸುವಂತಹ ಸ್ತಬ್ದ ಚಿತ್ರದ ಮುಂಭಾಗದಲ್ಲಿ ನಾರಾಯಣ ಗುರುಗಳ ಭಾವಚಿತ್ರವನ್ನು ಅಳವಡಿಸಿದ್ದಕ್ಕೆ ಕೇಂದ್ರ ಸರಕಾರ ಅದನ್ನು ತಿರಸ್ಕರಿಸಿದೆ.
ಪ್ರಾರಂಭದ ಅಂತದಲ್ಲಿ ರಕ್ಷಣಾ ಸಚಿವಾಲಯದ ತೀರ್ಪುಗಾರರು ಅದನ್ನು ಒಪ್ಪಿದ್ದು, ಕಡೆಯ ಅಂತದಲ್ಲಿ ಕೇಂದ್ರ ಸರಕಾರವು ನಾರಾಯಣ ಗುರುಗಳ ಬದಲಾಗಿ ಶ್ರೀ ಶಂಕರಚಾರ್ಯ ಮೂರ್ತಿಯನ್ನು ಇಟ್ಟರೆ ಮಾತ್ರ ಮಾನ್ಯ ಮಾಡುದೆಂದು ಹೇಳಿದ್ದು ಅದು ಖಂಡಿತಾ ನಾರಾಯಣ ಗುರುಗಳಿಗೆ ಮತ್ತು ಹಿಂದೂಳಿದ ವರ್ಗಗಳಿಗೆ ಮಾಡಿದ ಅಪಮಾನವಾಗಿದೆ ಎಂದರು.
ಒಂದೇ ಜಾತಿ, ಒಂದೇ ಮತ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದಂತಹ ಶ್ರೀ ನಾರಾಯಣ ಗುರುಗಳು, ರಾಜಕೀಯ ಕ್ಷೇತ್ರದಲ್ಲಿ ಧರ್ಮ ನಿರಾಪೇಕ್ಷಿತರ ಸಮಾಜ ಕಟ್ಟುವಲ್ಲಿ ಸಹಕರಿಸಿ ಕೇರಳವನ್ನಾ ಪ್ರಜ್ಞಾವಂತರ ನಾಡನ್ನಾಗಿ ಪರಿವರ್ತಿಸುವಲ್ಲಿ ಸಹಕರಿಸಿದವರು ಶ್ರೀ ನಾರಾಯಣಗುರುಗಳು. ತಾವೇ ದೇವಸ್ಥಾನಗಳನ್ನು ನಿರ್ಮಿಸಿ ಜನಿವಾರ ಇಲ್ಲದವರನ್ನು ಅರ್ಚಕರನ್ನಾಗಿ ಮಾಡಿ, ಹಿಂದುಳಿದ ವರ್ಗದವರನ್ನು, ದಲಿತರನ್ನು ಸಮಾನತೆಯಿಂದ ನೋಡಿದ ಶ್ರೇಷ್ಠ ವ್ಯಕ್ತಿ. ಕೇರಳದಲ್ಲಿ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೇ ಪ್ರಭಾವವನ್ನು ಹೊಂದಿದ್ದು, ಜಾತಿ ಮತ ಮೀರಿ ಅವರು ಆವರಿಸಿದ್ದರು. ಅವರ ಈ ಪ್ರತಿಮೆಯನ್ನು ಸಕರಾತ್ಮಕವಿಲ್ಲದೆ ತಿರಸ್ಕರಿಸಿದ್ದು, ಖಂಡಿತ ಅಪರಾಧವಾಗಿದೆ. ಇದು ನಾರಾಯಣ ಗುರುಗಳಿಗೆ ಮಾಡಿದ ಅಪಮಾನವಾಗಿದೆ ಎಂದರು.
ಜಯ ಪ್ರಕಾಶ್ ಬದಿನಾರು ರವರು ಮಾತನಾಡಿ, ಒಂದೇ ಜಾತಿ, ಒಂದೇ ಮತ ಎಂಬ ಸಂದೇಶವನ್ನು ನೀಡಿ ಸಮಾಜದ ಏಳಿಗೆಗಾಗಿ ದುಡಿದ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಕೇಂದ್ರ ಸರಕಾರ ತಿರಸ್ಕರಿಸಿರುವುದನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ. ಈ ಬಗ್ಗೆ ಕೇಂದ್ರ ಮತ್ತೊಂದು ಬಾರಿ ಚಿಂತಿಸಿ ಗುರುಗಳ ಸ್ತಬ್ದ ಚಿತ್ರ ಅಳವಡಿಸುವ ಬಗ್ಗೆ ಯೋಚನೆ ಮಾಡಲಿ ಎಂದರು.
ಹರೀಶ್ ರವರು ಮಾತನಾಡಿ, ಶ್ರೇಷ್ಠ ಸಮಾಜ ಸುಧಾರಕ ಸಂತ, ವಿಶ್ವದಲ್ಲಿ ಖ್ಯಾತಿಯನ್ನು ಪಡೆದಂತಹ ನಾರಾಯಣ ಗುರು ಸ್ವಾಮಿಯವರ ಸ್ತಬ್ದಚಿತ್ರವನ್ನು ಕೇಂದ್ರ ಸರ್ಕಾರ ನಿರಾಕರಿಸಿದ್ದು, ನ್ಯಾಯಸಮ್ಮತವಲ್ಲ, ಸರ್ವಧರ್ಮಿಯರು ಗೌರವಿಸುವಂತಹ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಕೇಂದ್ರ ನಿರಾಕರಿಸಿದ್ದನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತದೆ ಎಂದರು.