ಸುಬ್ರಹ್ಮಣ್ಯ: ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಿದ್ಯಾಮಾತಾ ಅಕಾಡೆಮಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಜ.17 ರಂದು ನಡೆಯಿತು.
ವಿದ್ಯಾಮಾತಾ ಅಕಾಡೆಮಿ ಪುತ್ತೂರು ಮತ್ತು ಕುಕ್ಕೆಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ನ ಸಹಯೋಗದಲ್ಲಿ ಐಎಎಸ್ ,ಕೆಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ಕುರಿತಂತೆ ತರಬೇತಿ ಕಾರ್ಯಾಗಾರ ನಡೆಯಿತು.
ಈ ಕಾರ್ಯಾಗಾರವನ್ನು ಉದ್ಘಾಟಿಸಿದ ಪ್ರಾಂಶುಪಾಲರಾದ ಗೋವಿಂದ ಎನ್ ಎಸ್ ರವರು ವಿದ್ಯಾಮಾತಾ ಅಕಾಡೆಮಿಯ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವಿದ್ಯಾಮಾತಾ ಅಕಾಡೆಮಿಯ ಆಡಳಿತ ನಿರ್ದೇಶಕರಾದ ಭಾಗ್ಯೇಶ್ ರೈ ರವರು ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ, ಸಂಬಂಧಿಸಿದ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳುವುದರಿಂದ ಹಿಡಿದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ಮಾನಸಿಕ ತಯಾರಿ ಬಗ್ಗೆ ವಿದ್ಯಾರ್ಥಿಗಳಿಗೆ ಸೂಚನೆಗಳನ್ನು ನೀಡಿದರು.
ವಿದ್ಯಾಮಾತಾ ಅಕಾಡೆಮಿಯ ಗೌರವ ತರಬೇತುದಾರರಾದ ಅರವಿಂದ ಚೊಕ್ಕಾಡಿಯವರು ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟು ಐಎಎಸ್, ಕೆಎಎಸ್ ಸಂಬಂಧಿಸಿದಂತೆ ವಿಷಯಾಧಾರಿತ ಪೂರ್ವ ತಯಾರಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಕಾರ್ಯಕ್ರಮವು ಕಾಲೇಜಿನ ಮಾನವ ಸಂಪನ್ಮೂಲ ಮತ್ತು ಪ್ಲೇಸ್ಮೆಂಟ್ ಸೆಲ್ ನ ಸಂಯೋಜಕರಾದ ವಿನ್ಯಾಸ್ ಎಚ್ ರವರ ಸಹಕಾರದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ಲೇಸ್ಮೆಂಟ್ ಸೆಲ್ ನ ಕಾರ್ಯದರ್ಶಿ ಸಾಕ್ಷಾತ್ ಅತಿಥಿಗಳನ್ನು ಸ್ವಾಗತಿಸಿದರು. ಕುಮಾರಿ ಚಿಂತನ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾಮಾತಾ ಅಕಾಡೆಮಿಯ ಚಂದ್ರಕಾಂತ, ಹರ್ಷಿತಾ ಆಚಾರ್ಯ ,ಸನತ್ ಕುಮಾರ್ ರೈ, ಲಕ್ಷೀಶ ಸಿ.ಎಸ್ , ಪ್ರಜ್ಞಾ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯ ನಿರ್ವಹಿಸಿದರು.
ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ನಡೆಸಲಾಯಿತು. ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.