ವಿಟ್ಲ: ತಾನು ಪ್ರೀತಿಸುತ್ತಿದ್ದ ಯುವತಿಯನ್ನು ನೋಡಲು ಬಂದ ಸಮೀರ್ ಮತ್ತು ಆತನ ಸ್ನೇಹಿತ ಆಶಿಕ್ ಗೆ ಯುವತಿಯ ತಂದೆ, ಅಣ್ಣ ಮತ್ತು ಸಂಬಂಧಿಕರು ಸೇರಿ ಹಲ್ಲೆ ನಡೆಸಿದ ಘಟನೆ ಹೇಮಾಜೆಯಲ್ಲಿ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆಶಿಕ್ ನೀಡಿದ ದೂರಿನಂತೆ ನಾಲ್ವರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಬಾಪ ಕುಂಞಿ, ಹಕೀಮ್, ಹಂಝ, ಅಶ್ರಫ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜ.17 ರಂದು ಮದ್ಯಾಹ್ನ ಸ್ನೇಹಿತ ಸಮೀರ್ ನನ್ನು ಸ್ಕೂಟರ್ ನಲ್ಲಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಹೇಮಾಜೆ ಎಂಬಲ್ಲಿ ಬಿಟ್ಟು, ವಾಪಸ್ಸು ಕರೆದುಕೊಂಡು ಹೋಗಲು ಅಲ್ಲಿಯೇ ರಸ್ತೆ ಬದಿಯಲ್ಲಿ ಕಾಯುತ್ತ ನಿಂತಿರುವಾಗ ಬಿಳಿ ಬಣ್ಣದ ಬೊಲೆರೋ ವಾಹನದಲ್ಲಿ ಬಂದ ನಾಲ್ವರು ಆಶಿಕ್ ಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದು, ಮತ್ತೆ ನೀನು ಇಲ್ಲಿಗೆ ಬಂದರೆ ನಿನ್ನನ್ನು ಕಡಿದು ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 14/2022 ಕಲಂ:504, 323, 324, 506 ಜೊತೆಗೆ 34 ಬಾಧಂಸಂ ನಂತೆ ಪ್ರಕರಣ ದಾಖಲಾಗಿದೆ.
ಕೋಲ್ಪೆ ಸಮೀಪದ ಯುವಕ ಸಮೀರ್ ಮತ್ತು ಆತನ ಸ್ನೇಹಿತ ಆಶಿಕ್ ವಿಟ್ಲ ಹೇಮಾಜೆ ಸಮೀಪದಲ್ಲಿರುವ ಸಮೀರ್ ನ ಪ್ರಿಯತಮೆಯ ಮನೆಗೆ ಮಾತನಾಡಿಸಲು ಬಂದಿದ್ದು, ಆ ವೇಳೆ ಆಕೆಯ ಮನೆಯವರು ತಡೆಗಟ್ಟಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಹಲ್ಲೆಯಿಂದಾಗಿ ಆಶಿಕ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.