ಮಂಗಳೂರು: ಹನಿಟ್ರಾಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಾಸನ ಅರಕಲಗೂಡು ತಾಲೂಕಿನ ಕುಮಾರ್ ಯಾನೆ ರಾಜು ಮತ್ತು ಕೊಡಗು ಶನಿವಾರ ಸಂತೆ ಮೈಲಾಪುರ ಗ್ರಾಮದ ಭವ್ಯಾ ದಂಪತಿಯನ್ನು ಬಂಧಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಮಂಗಳೂರಿನ ಪದವಿನಂಗಡಿಯ ಬಾಡಿಗೆ ಮನೆಯ ದಂಪತಿ ನಡುವಿನ ಸಮಸ್ಯೆಯನ್ನು ಪರಿಹರಿಸಲು ಮನೆಯಲ್ಲಿ ಪೂಜೆ ಮಾಡಬೇಕೆಂದು ಪುರೋಹಿತರನ್ನು ಕರೆಸಿ ಹನಿಟ್ರಾಪ್ ಮಾಡಿ ವ್ಯಕ್ತಿಯನ್ನು ಸುಲಿಗೆ ಮಾಡಿದ ಕೃತ್ಯಕ್ಕೆ ಸಂಬಂಧಿಸಿ ಇವರನ್ನು ಬಂಧಿಸಲಾಗಿದೆ.
ಆರೋಪಿಗಳು ಇದೇ ರೀತಿ ಹಲವರಿಗೆ ಸುಲಿಗೆ ಮಾಡಿರುವ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ. ಆರೋಪಿಗಳಿಂದ 37 ಸಾವಿರ ರೂಪಾಯಿ ಮೌಲ್ಯದ 2 ಚಿನ್ನದ ರಿಂಗ್, ನಗದು ಹಣ ಹಾಗೂ 31 ಸಾವಿರ ರೂಪಾಯಿ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಜೊತೆ ಇನ್ನೂ ಹಲವರು ಭಾಗಿಯಾಗಿದ್ದಾರೆ, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳು ಇನ್ನಷ್ಟು ಹಣಕ್ಕಾಗಿ ಪೊಲೀಸರ, ಪೊಲೀಸ್ ಸಬ್ ಇನಸ್ಪೆಕ್ಟರ್ ಅವರ, ಮಹಿಳಾ ಸಂಘಟನೆಗಳ ಹೆಸರಿನಲ್ಲಿ ಬೆದರಿಕೆ ಹಾಕಿರುವುದಲ್ಲದೇ, ಇನ್ನಷ್ಟು ಹಣವನ್ನು ನೀಡದೇ ಇದ್ದಲ್ಲಿ ಸುದ್ದಿ ಮಾಧ್ಯಮಗಳಲ್ಲಿ ಪೋಟೊ ಮತ್ತು ವಿಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದರು ಎಂದರು.
ಹನಿಟ್ರಾಪ್ ಮಾಡಿ ಸುಲಿಗೆ ಮಾಡಿದ ಹಣದಲ್ಲಿ ಆರೋಪಿಗಳು ಐಷಾರಾಮಿ ಜೀವನವನ್ನು ಸಾಗಿಸುತ್ತಿದ್ದರು. ಮೊದಲು ಸಣ್ಣ ಬಾಡಿಗೆ ಮನೆಯಲ್ಲಿದ್ದ ಆರೋಪಿಗಳು ಈ ಕೃತ್ಯವೆಸಗಿದ ನಂತರ ಫಿರ್ಯಾದಿದಾರರಿಂದ ಸುಲಿಗೆ ಮಾಡಿದ ಹಣದಲ್ಲಿ ರೂ 10 ಲಕ್ಷ ಹಣವನ್ನು ನೀಡಿ ಫ್ಲಾಟ್‌ವೊಂದನ್ನು ಲೀಸ್‌ಗೆ ಪಡೆದುಕೊಂಡಿರುವುದಲ್ಲದೇ, ಈ ಫ್ಲಾಟ್ ಗೆ ಸುಮಾರು 7 ಲಕ್ಷ ಮೌಲ್ಯದ ಮನೆ ಸಾಮಾಗ್ರಿಗಳನ್ನು ಖರೀದಿಸಿದ್ದಾರೆ. ಅಲ್ಲದೇ ಹೊಸ ದ್ವಿಚಕ್ರ ವಾಹನವೊಂದನ್ನು ಖರೀದಿಸಿದ್ದಾರೆ. ಆರೋಪಿ ಭವ್ಯಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 5 ದಿನಗಳ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದರು.