ಮಂಗಳೂರು: ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ಮಂಗಳೂರಿನ ಉರ್ವ ಸ್ಟೋರ್ ನಿಂದ ನಾಪತ್ತೆಯಾಗಿದ್ದ ಬೆಳ್ಳಾರೆ ಮೂಲದ ವಿವಾಹಿತ ಮಹಿಳೆ ದಿವ್ಯಾ(29) ರವರನ್ನು ಪೋಲಿಸರು ಪತ್ತೆ ಹಚ್ಚಿದ್ದಾರೆ.
ಬೆಳ್ಳಾರೆ ಕಲ್ಮಡ್ಕದ ಮನೆಯಿಂದ ನಿನ್ನೆ ಮುಂಜಾನೆ ತನ್ನ ಅಕ್ಕ ಚೈತ್ರಾ ಅವರೊಂದಿಗೆ ಮಂಗಳೂರಿಗೆ ಬಂದಿದ್ದ ದಿವ್ಯಾ ಎಂಬ ಮಹಿಳೆ ಉರ್ವ ಸ್ಟೋರ್ ಮೂಡ ಬಿಲ್ಡಿಂಗ್ ಮುಂಭಾಗ ಎಸ್.ಆರ್. ಫ್ಯಾನ್ಸಿ ಬಳಿ ಬಂದ ಬಳಿಕ ಬ್ಯಾಂಕಿಗೆ ಹೋಗಿ ಬರುತ್ತೇನೆ ಎಂದು ತಿಳಿಸಿ ಬಳಿಕ ಬಾರದೆ, ಫೋನ್ ಕರೆಗೂ ಸಿಗದೇ ನಾಪತ್ತೆಯಾಗಿದ್ದರು.
ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ, ಎಲ್ಲಾದರೂ ಕಂಡರೆ ಮಾಹಿತಿ ನೀಡುವಂತೆ ಕೋರಿ ಮಹಿಳೆಯ ಪತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಮೊಬೈಲ್ ನಂಬರ್ ಸಹಿತ ಸಂದೇಶ ರವಾನಿಸಿ ಪತ್ತೆ ಹಚ್ಚಲು ಕೋರಿಕೊಂಡಿದ್ದರು.
ಅಲ್ಲದೇ ಉರ್ವ ಪೊಲೀಸ್ ಠಾಣೆಯಲ್ಲಿ ದಿವ್ಯಾ ಅವರ ಅಕ್ಕ ಚೈತ್ರಾ ಅವರು ನೀಡಿದ ದೂರಿನಂತೆ ನಾಪತ್ತೆ ಪ್ರಕರಣ ದಾಖಲಾಗಿದ್ದು, ಮಹಿಳೆಯ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ದಿವ್ಯಾ ರವರನ್ನು ಮೈಸೂರಿನಲ್ಲಿ ಮಂಗಳೂರು ಪೋಲಿಸರು ಪತ್ತೆಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನಿಂದ ಅವರನ್ನು ಮಂಗಳೂರಿಗೆ ಕರೆತರಲಾಗಿದ್ದು, ಅವರ ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.