ಕುಮಟಾ: ತಾಲೂಕಿನ ಹೊನ್ಮಾವ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಅನಿಲ ಸೋರಿಕೆಯಾದ ಘಟನೆ ನಡೆದಿದೆ.
ಮಂಗಳೂರಿನಿಂದ ಅಂಕೋಲಾ ಕಡೆಗೆ ಹೊರಟಿದ್ದ ಟ್ಯಾಂಕರ್ ಪಲ್ಟಿಯಾದ ರಭಸಕ್ಕೆ ಸ್ವಲ್ಪ ಮಟ್ಟಿಗೆ ಅನಿಲ ಸೋರಿಕೆಯಾಗುತ್ತಿದ್ದು, ರಸ್ತೆ ಸಂಚಾರವನ್ನು ಕೆಲ ಕಾಲ ತುರ್ತು ಕಾರಣಕ್ಕಾಗಿ ಸ್ಥಗಿತಗೊಳಿಸಲಾಗಿತ್ತು. ತತ್‍ಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು ರಸ್ತೆ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ಅನಿಲ ಸೋರಿಕೆಯಾಗುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಗುಡಿಗಾರಗಲ್ಲಿ, ಪೈರಗದ್ದೆ, ನಾಗದೇವಿ ರೊಡ್, ಹೊನ್ಮಾವ್, ದೇವರಹಕ್ಕಲ, ಎಪಿಎಮ್ ಸಿ, ಬಗ್ಗೋಣ ಭಾಗದ ಜನರು ಮನೆಯಲ್ಲಿ ಅಡುಗೆ ಹಾಗೂ ದೇವರ ದೀಪಗಳನ್ನು ಹಚ್ಚದಂತೆ ತಾಲೂಕು ಆಡಳಿತ ಮನವಿ ಮಾಡಿಕೊಂಡಿದೆ. ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.