ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅವಾಂತರದಿಂದಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ರವರ ಮನೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದ ಘಟನೆ ಗುರುವಾರ ರಾತ್ರಿ ವೇಳೆ ನಡೆದಿದೆ. ಗೋಡೆ ಬಿದ್ದ ವೇಳೆ ಸ್ಥಳದಲ್ಲಿದ್ದ ದ್ವಿಚಕ್ರ ವಾಹನವೊಂದು ಜಖಂ ಆಗಿದೆ.
ಎರಡು ಬಾರಿ ಕಂಪೌಂಡ್ ನಿರ್ಮಾಣ:
ರಾಷ್ಟ್ರೀಯ ಹೆದ್ದಾರಿಯ ಚತುಷ್ಪತ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಕಲ್ಲಡ್ಕ ಪೇಟೆಯಲ್ಲಿ ಎಷ್ಡು ಮೀಟರ್ ರಸ್ತೆ ಅಗಲೀಕರಣಗೊಳ್ಳುತ್ತದೆ ಎಂಬುದರ ಸ್ಪಷ್ಟವಾದ ಲೆಕ್ಕ ನೀಡದೆ ಜನ ಗೊಂದಲದಲ್ಲಿದ್ದಾರೆ. ಕಲ್ಲಡ್ಕ ಪೇಟೆಯಲ್ಲಿ ಪ್ಲೈ ಓವರ್ ನಿರ್ಮಾಣದ ಪ್ಲಾನ್ ತಯಾರಿಸಿದ ಬಳಿಕ ರಸ್ತೆಯ ಇಕ್ಕೆಲಗಳು ಬಾಕಿ ಉಳಿದ ಕಡೆಗಳಿಗಿಂತ ಕಡಿಮೆ ಜಾಗ ಎಕ್ವೇರ್ ಮಾಡುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ಲೈ ಓವರ್ ನ ಎರಡು ಬದಿಗಳಲ್ಲಿ ಸರ್ವೀಸ್ ರಸ್ತೆ ನಿರ್ಮಾಣ ಗೊಳ್ಳುತ್ತದೆ ಈಗಾಗಿ ರಸ್ತೆ ಅಗಲೀಕರಣದ ಸರಿಯಾದ ಸರ್ವೆ ಕಾರ್ಯ ಮುಗಿದಿಲ್ಲ ಎಂಬುದು ಸ್ಥಳೀಯರ ಮಾತು. ಹಾಗಾಗಿ ಡಾ. ಪ್ರಭಾಕರ್ ಭಟ್ ಅವರ ಮನೆಯ ಕಾಂಪೌಂಡ್ ಎರಡು ಬಾರಿ ನಿರ್ಮಾಣ ಮಾಡಲಾಗಿತ್ತು. ಒಂದು ಬಾರಿ ರಸ್ತೆ ಅಗಲೀಕರಣಕ್ಕಾಗಿ ಕೆಂಪು ಕಲ್ಲು ಬಳಸಿ ಕಟ್ಟಲಾಗಿತ್ತು. ಆ ಬಳಿಕ ಮತ್ತೆ ಕಾಂಕ್ರೀಟ್ ಸಿಮೆಂಟ್ ಮೂಲಕ ತಡೆಗೋಡೆ ರೀತಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸಲಾಗಿತ್ತಾದರೂ ಯಾವುದೇ ಪ್ರಯೋಜನಕ್ಕೆ ಬಾರದೆ ನೆಲಸಮವಾಗಿದೆ.
ಸಡಿಲ ಮಣ್ಣು , ಮುರಿದು ಬಿದ್ದ ಕಾಂಪೌಂಡ್:
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಅಗಲೀಕರಣದ ಜೊತೆ ಸರಾಗವಾಗಿ ಮಳೆ ನೀರು ಹರಿದು ಹೋಗುವ ಉದ್ದೇಶದಿಂದ ಅಲ್ಲಲ್ಲಿ ಸಿಮೆಂಟ್ ಪೈಪ್ ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ.
ಕಲ್ಲಡ್ಕ ಮುಖ್ಯಪೇಟೆಯಲ್ಲಿರುವ ಡಾ. ಪ್ರಭಾಕರ್ ಭಟ್ ಅವರ ಮನೆಯ ಮುಂಭಾಗದಲ್ಲಿ ಕೂಡ ಸಿಮೆಂಟ್ ಪೈಪ್ ಅಳವಡಿಕೆಗಾಗಿ ಕಾಂಪೌಂಡ್ ನ ಸುತ್ತ ಅಗೆಯಲಾಗಿತ್ತು. ಕಾಂಪೌಂಡ್ನ ಬದಿಯಲ್ಲಿ ಮತ್ತು ಅಡಿಪಾಯದ ವರಗೆ ಅಗೆದ ಪರಿಣಾಮ ಜೊತೆಗೆ ಸಡಿಲ ಮಣ್ಣಿನ ಕಾರಣದಿಂದ ಕಾಂಪೌಂಡ್ ಗೋಡೆ ಜರಿದು ಬಿದ್ದಿದೆ.
ಗುತ್ತಿಗೆ ವಹಿಸಿಕೊಂಡ ಕೆ.ಎನ್.ಆರ್ ಕಂಪೆನಿ ಸ್ಥಳೀಯರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಸುವಂತೆ ಮತ್ತು ರಸ್ತೆ ಅಗಲೀಕರಣದ ಸರಿಯಾದ ಸರ್ವೇ ಕಾರ್ಯದ ಮಾಹಿತಿ ನೀಡುವಂತೆ ಅಗ್ರಹಿಸಿದ್ದಾರೆ.