ಬೆಳ್ತಂಗಡಿ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಸಂದಿವೆ. ಸಂವಿಧಾನ ಸಮರ್ಪಣೆಯಾಗಿ 73 ವರ್ಷಗಳು ಸಂದರೂ ಸಂವಿಧಾನದ ಮೂಲ ಆಶಯಗಳು ಇನ್ನೂ ಜಾರಿಯಾಗದಿರುವುದು ದುರಂತ ಎಂದು ಪ್ರಗತಿಪರ ಚಿಂತಕ, ಬರಹಗಾರ ಜಿ.ಎನ್ ಧನಂಜಯ ಮೂರ್ತಿ ಹೇಳಿದರು.
ಅವರು ಸಂವಿಧಾನ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ವತಿಯಿಂದ ನಡೆದ ಬೈಕ್ ರಾಲಿ ಹಾಗೂ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಶದ ಸಂವಿಧಾನದ ಮೂಲ ಆಶಯಗಳು ಇಂದಿಗೂ ಈಡೇರಿಲ್ಲ. ಸಂವಿಧಾನದ ಸಮಾನತೆ ಎಂಬುದು ಗಗನ ಕುಸುಮವಾಗಿದೆ. ದಲಿತರ ಮೇಲಿನ ದೌರ್ಜನ್ಯ ದಿನನಿತ್ಯ ವರದಿಯಾಗುತ್ತದೆ. ಎರಡು ವರ್ಷದ ಪುಟ್ಟ ಮಗುವೊಂದು ದೇವಸ್ಥಾನ ಪ್ರವೇಶಿಸಿದ ಏಕೈಕ ಕಾರಣಕ್ಕಾಗಿ 25 ಸಾವಿರ ದಂಡ ವಿಧಿಸುವ ಸಮಾಜದಲ್ಲಿ ಯಾವ ಸಮಾನತೆ ಇದೆ ಎಂದು ಪ್ರಶ್ನಿಸಿದ ಅವರು ಕರೋನ ಲಾಕ್ ಡೌನ್ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳಲ್ಲಿ ದೇಶದಲ್ಲಿ 150 ñ
ಬಿಲಿಯನ್ಪತಿಗಳು ಸೃಷ್ಟಿಯಾಗಿದ್ದಾರೆ. ಬಡವರು ಬೀದಿಗೆ ಬಿದ್ದಿದ್ದಾರೆ. ಈ ಅಸಮಾನತೆಯ ವಿರುದ್ದ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಸಾಮಾಜಿಕ ಹೋರಾಟ ಇಂದಿನ ಭಾರತದ ಅಗತ್ಯಗಳಲ್ಲಿ ಒಂದು. ಸಂವಿಧಾನದ ಮೂಲ ಆಶಯಗಳನ್ನು ಉಳಿಸಲು ನಮ್ಮ ಕೊನೆಯುಸಿರುವ ಇರುವ ತನಕ ಹೋರಾಟ ನಡೆಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಭೀಮ್ ಆರ್ಮಿ ಹಾಸನ ಜಿಲ್ಲಾ ಗೌರವಾಧ್ಯಕ್ಷ ವಿಜಯಕುಮಾರ್ ಹಾದಿಗೆ ಮಾತನಾಡಿ, ಮಹಿಳೆಯರು ಸೇರಿದಂತೆ ಅತ್ಯಂತ ಶೋಷಿತ ಸಮುದಾಯಕ್ಕೆ ಸ್ವಾಭಿಮಾನದ ಬದುಕು ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರನ್ನು ನಾವು ಎಂದಿಗೂ ಮರೆಯಬಾರದು. ನಾವು ಈ ಮಣ್ಣಿನ ಮೂಲ ನಿವಾಸಿಗಳು , ನಮ್ಮ ಮೇಲಿನ ದೌರ್ಜನ್ಯ ವಿವಿಧ ರೀತಿಯಲ್ಲಿ ಇಂದಿಗೂ ಮುಂದುವರಿದಿದ್ದು , ಇದರ ವಿರುದ್ಧ ನಾವು ಸಿಡಿದೇಳದಿದ್ದರೆ ನಾವು ಸತ್ತು ಬದಕಿದಂತೆ ಎಂದ ಅವರು ಅಂಬೇಡ್ಕರ್ ಬರೆದ ನಮ್ಮ ದೇಶದ ಸಂವಿಧಾನ ಅಪಾಯಕಾರಿಯಲ್ಲಿದೆ. ನಮ್ಮ ದೇಶದ ಶೋಷಿತ ವರ್ಗ , ದಲಿತ, ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು , ಉಳಿಸಲು ನಮ್ಮ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂವಿಧಾನ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಸುಂದರ ಕಾಶಿಪಟ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯದರ್ಶಿ ಅವಿನಾಶ್ ಕುರ್ಲೊಟ್ಟು , ದಸಂಸ (ಅಂಬೇಡ್ಕರ್ ವಾದ) ದ ಕುಕ್ಕೇಡಿ-ನಿಟ್ಟಡೆ ಗ್ರಾಮ ಸಮಿತಿ ಸಂಚಾಲಕ ಶ್ರೀಧರ ಕುಂಡದಬೆಟ್ಟು ಉಪಸ್ಥಿತರಿದ್ದರು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ , ದಸಂಸ (ಅಂಬೇಡ್ಕರ್ ವಾದ) ದ ತಾಲೂಕು ಸಂಘಟನಾ ಸಂಚಾಲಕ ಶೇಖರ್ ಕುಕ್ಕೇಡಿ ಸ್ವಾಗತಿಸಿ , ಉಪನ್ಯಾಸಕ ಚಂದ್ರಪ್ಪ ಮಾಸ್ಟರ್ , ಸುಕೇಶ್ ಮಾಲಾಡಿ ಧನ್ಯವಾದಗೈದರು.