ಬೆಳ್ತಂಗಡಿ: ದ.ಕ ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿಯ ಸಂಧ್ಯಾ ಎಂಬವರನ್ನು ಅಕ್ರಮ ಮರಕಳ್ಳತನದ ವಿರುದ್ಧ ಕ್ರಮ ಕೈಗೊಂಡಿರುವ ಕಾರಣಕ್ಕಾಗಿ ಬೀದರ್ ಜಿಲ್ಲೆಗೆ ವರ್ಗಾಯಿಸುವಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು ಶಿಫಾರಸ್ಸು ಮಾಡಿದ್ದಾರೆ ಎಂದು ಆರೋಪಿಸಿ , ಅರಣ್ಯ ಅಧಿಕಾರಿ ಸಂಧ್ಯಾ ಎಂಬವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಿಗೆ ದೂರು ನೀಡಿರುವ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉಡುಪಿಯ ಅರಣ್ಯ ಸಂಚಾರಿ ದಳದ ವಲಯ ಅರಣ್ಯಾಧಿಕಾರಿಯಾಗಿದ್ದು, ಪ್ರಸ್ತುತ ಮಂಗಳೂರಿನ ಅರಣ್ಯ ಸಂಚಾರಿ ದಳದ ಪ್ರಭಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿಯ ಸಂಧ್ಯಾ ಸಚಿನ್ ರವರು ಬೆಳ್ತಂಗಡಿ ತಾಲೂಕಿನ ಅಕ್ರಮ ಮರಗಳ್ಳರ, ಅಕ್ರಮ ಸಾಗಾಟಗಾರರ ಮರಮಟ್ಟು ಹಾಗೂ ವಾಹನಗಳನ್ನು ಇಲಾಖೆ ವಶಪಡಿಸಿಕೊಂಡಿರುವ ಕಾರಣ ಶಾಸಕ ಹರೀಶ್ ಪೂಂಜರವರು ಕೋಪಗೊಂಡು ಈ ಕೆಲಸ ಮಾಡಿರುತ್ತಾರೆ.
ನನ್ನ ಮೇಲಿನ ಅಧಿಕಾರಿಗಳ ಆದೇಶದ ಮೇರೆಗೆ ನಾನು ಅಕ್ರಮ ಮರ ದಾಸ್ತಾನುಗಳಿಗೆ ದಾಳಿ ನಡೆಸಿ ಪ್ರಕರಣ ದಾಖಲಿಸಿರುತ್ತೇನೆ. ಆದರೆ ಬೆಳ್ತಂಗಡಿ ಶಾಸಕರು ನನ್ನಲ್ಲಿ ವೈಯುಕ್ತಿಕ ದ್ವೇಷ ಹಗೆತನ ಸಾಧಿಸಿ ಅಕ್ರಮ ಮರಗಳ್ಳರಾದಂತಹ ಬಾಲಕೃಷ್ಣ ಬದ್ಯಾರು, ಇನ್ನಿತರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಹಿಳಾ ಅಧಿಕಾರಿಯಾದ ನನ್ನನ್ನು ದೂರದ ಬೀದರ್ ಗೆ ವರ್ಗಾಯಿಸಿರುತ್ತಾರೆ. ನನ್ನ ವಿರುದ್ಧ ನಡೆದ ದಬ್ಬಾಳಿಕೆಯನ್ನು ಖಂಡಿಸಿ ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿ ಸಂಧ್ಯಾರವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರು, ದ.ಕ ಜಿಲ್ಲಾ ಅರಣ್ಯ ಸಂಚಾರಿ ದಳದ ಪ್ರಭಾರ ಅಧಿಕಾರಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಸಂಧ್ಯಾ ಸಚಿನ್ ರವನ್ನು ಅಕ್ರಮ ಮರಕಳ್ಳತನದ ವಿರುದ್ಧ ಕ್ರಮ ಕೈಗೊಂಡಿರುವ ಕಾರಣಕ್ಕಾಗಿ ಬೀದರ್ ಜಿಲ್ಲೆಗೆ ವರ್ಗಾಯಿಸುವಂತೆ ಬೆಳ್ತಂಗಡಿ ಶಾಸಕರು ಶಿಫಾರಸ್ಸು ಮಾಡಿರುವುದು ಖಂಡನೀಯವಾಗಿದ್ದು, ಅಧಿಕಾರಿಗೆ ವಿನಾ ಕಾರಣ ಈ ರೀತಿಯ ವರ್ಗಾವಣೆ ಶಿಕ್ಷೆ ನೀಡಿರುವುದನ್ನು ತಕ್ಷಣ ರದ್ದು ಪಡಿಸುವಂತೆ ಸಂಘದ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಪ್ರಕಟಣೆಗಾಗಿ ತಿಳಿಸಿದ್ದಾರೆ ಎನ್ನಲಾದ ಪತ್ರ ಹಾಗೂ ಸಂಧ್ಯಾರವರು ಸಂಘಕ್ಕೆ ಬರೆದ ದೂರು ಪತ್ರ ಹಾಗೂ ಅಧಿಕಾರಿ ಸಂಧ್ಯಾ ಸಚಿನ್ ರನ್ನು ವರ್ಗಾವಣೆಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ ಎನ್ನಲಾದ,ಶಾಸಕ ಹರೀಶ್ ಪೂಂಜರವರ ಸಹಿ ಇರುವಂತಹ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸದ್ಯ ಈ ವಿಷಯದ ಕುರಿತಾಗಿ ಭಾರೀ ಚರ್ಚೆ ನಡೆಯುತ್ತಿದೆ.
































