ಬಂಟ್ವಾಳ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 14 ಮತ್ತು 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆ ಮಾಣಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಗ್ರಾಮ ಸಭೆಗಳಲ್ಲಿ ಗ್ರಾಮಸ್ಥರಿಗೆ ಇಲಾಖೆಗಳ ಮಾಹಿತಿಗಳನ್ನು ನೀಡುವುದರ ಜೊತೆಗೆ ಜನರಿಗೆ ಸಿಗಬಹುದಾದ ಸೌಲಭ್ಯಗಳ ಬಗ್ಗೆಯೂ ಮಾಹಿತಿಯನ್ನು ನೀಡಲಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಿಂದ ಗ್ರಾಮಸ್ಥರ ವೈಯಕ್ತಿಕ ಮತ್ತು ಸಮುದಾಯದ ಕಾಮಗಾರಿಗಳಿಗೆ ಬಹಳಷ್ಟು ಅನುಕೂಲವಾಗುತ್ತಿದೆ, ಫಲಾನುಭವಿಗಳು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಗ್ರಾಮ ಸಭೆಯ ನೋಡೆಲ್ ಅಧಿಕಾರಿ, ಅಕ್ಷರ ದಾಸೋಹ ಇಲಾಖೆಯ ತಾಲೂಕು ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್ ರವರು ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕೇವಲ ಯೋಜನೆಯಲ್ಲ, ಇದೊಂದು ಕಾಯಿದೆ. ಉದ್ಯೋಗ ರಹಿತರಿಗೆ ಉದ್ಯೋಗವನ್ನು ನೀಡುವ ದೃಷ್ಟಿಯಿಂದ ಸರಕಾರ ಕೈಗೊಂಡ ದಿಟ್ಟ ನಿರ್ಧಾರ. ಮಾಣಿ ಗ್ರಾಮ ಪಂಚಾಯಿತಿಯ ವರದಿಯನ್ನು ಕಂಡಾಗ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಅವಕಾಶ ಕಾಣುತ್ತಿದೆ. ಅದು ಆದಷ್ಟು ಬೇಗ ಈಡೇರುವಂತಾಗಲಿ ಎಂದು ಹೇಳಿದರು.
ತೋಟಗಾರಿಕಾ ವಿಭಾಗದ ಸಹಾಯಕ ಅಭಿಯಂತರರಾದ ಕುಮಾರಿ ದೀಪಿಕಾ ಮತ್ತು ತಾಲೂಕು ಸಂಯೋಜಕಿ ಅಂಜಲಿ ಶೇಟ್ ವಿವಿಧ ವಿಚಾರಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಪ್ರೀತಿ ಡಿನ್ನಾ ಪಿರೇರಾ, ಸದಸ್ಯರುಗಳಾದ ಮೆಲ್ವಿನ್ ಕಿಶೋರ್ ಮಾರ್ಟಿಸ್, ರಮಣಿ. ಡಿ.ಪೂಜಾರಿ, ನಾರಾಯಣ ಶೆಟ್ಟಿ, ಸೀತಾ, ಮಿತ್ರಾಕ್ಷಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಸ್ವಾಗತಿಸಿ, ವಂದಿಸಿದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.