ಪುತ್ತೂರು: ಕೆದಂಬಾಡಿಯ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶ ಹಾಗೂ ಉತ್ಸವವು ಫೆ.1 ರಿಂದ ಫೆ.7ರ ತನಕ ನಡೆಯಲಿದೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಯಲಿದೆ.
ಫೆ. 01 ಮಂಗಳವಾರದಂದು ಹಸಿರುವಾಣಿ ಮೆರವಣಿಗೆಯು ಶ್ರೀ ದೇವತಾ ಭಜನಾ ಮಂದಿರ ಶ್ರೀಕ್ಷೇತ್ರ ದೇವಗಿರಿ ತಿಂಗಳಾಡಿಯಿಂದ ಪೂರ್ವಾಹ್ನ ಗಂಟೆ 11-00 ಕ್ಕೆ ಹೊರಟು, ಎಲೆಯ ಶ್ರೀ ವಿಷ್ಣುಮೂರ್ತಿ ದೇವಳಕ್ಕೆ ವೈಭವದ ಮೆರವಣಿಗೆಯೊಂದಿಗೆ ಬರಲಿದೆ. ಫೆ.2 ರಿಂದ ಫೆ.5ರವರೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ. ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೆ. 1ರಂದು ಬೆಳಗ್ಗೆ ಗಂಟೆ 8:30ಕ್ಕೆ ಸಾಮೂಹಿಕ ಪ್ರಾರ್ಥನೆ, ಬಳಿಕ ಉಗ್ರಾಣ ಮೂಹೂರ್ತ, ಪಾಕಶಾಲೆ ಉದ್ಘಾಟನೆ, ಮುಖ್ಯ ವೇದಿಕೆ ಉದ್ಘಾಟನೆ, ಭಜನಾ ಕಾರ್ಯಕ್ರಮ ಉದ್ಘಾಟನೆ, ಬ್ರಹ್ಮಕಲಶೋತ್ಸವ ಕಾರ್ಯಾಲಯ ಉದ್ಘಾಟನೆ, ದೇವಳದ ನವೀಕೃತ ಮೆಟ್ಟಿಲು ಉದ್ಘಾಟನೆ, ಅಂಗಳದ ನವೀಕೃತ ಇಂಟರ್‌ಲಾಕ್ ಉದ್ಘಾಟನೆ, ನವೀಕೃತ ವಿದ್ಯುತ್ ಸಂಪರ್ಕ ಉದ್ಘಾಟನೆ, ಕೊಳವೆಬಾವಿ ಉದ್ಘಾಟನೆ, ಭದ್ರತಾ ಕೊಠಡಿಯ ಲಾಕರ್ ಉದ್ಘಾಟನೆ (ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮುಂಡೂರು ಪ್ರಾಯೋಜಿತ)ಯನ್ನು ವಿವಿಧ ಗಣ್ಯರು ಉದ್ಘಾಟಿಸಲಿದ್ದಾರೆ.
ಫೆ. 6ರಂದು ಬೆಳಗ್ಗೆ 8:20ಕ್ಕೆ ಶ್ರೀ ವಿಷ್ಣು ಮೂರ್ತಿ ದೇವರ ಬಿಂಬ ಪ್ರತಿಷ್ಠೆ, ಜೀವಕಲಶಾಭಿಷೇಕ, ಜೀವಾವಾಹನೆ, ಶಿಖರ ಪ್ರತಿಷ್ಠೆ, ಪಿಲಿಭೂತ, ರಕ್ತೇಶ್ವರಿ, ಶಿರಾಡಿ, ಪಂಜುರ್ಲಿ ದೈವಗಳ ಪ್ರತಿಷ್ಠೆ ಮುಂದುವರಿದು ಪರಿಕಲಶ ಅಭಿಷೇಕ, ಬ್ರಹ್ಮಕಲಶ ಅಭಿಷೇಕ, ಪರಿವಾರ ಪ್ರತಿಷ್ಠೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುಸಿದು ಬೀಳುವ ಸ್ಥಿತಿಗೆ ತಲುಪಿದ್ದ ಶತಮಾನಗಳ ಇತಿಹಾಸದ ದೇವಸ್ಥಾನವನ್ನು ಶ್ರಮಶಕ್ತಿ- ಸಂಘಟನಾ ಶಕ್ತಿಯಿಂದಲೇ ಹೊಸದಾಗಿ ಕಟ್ಟಿದ ಯಶೋಗಾಥೆ:
ದೇಗುಲ ಪೂರ್ತಿ ಶಿಥಿಲಾವಸ್ಥೆ ತಲುಪಿ ಕುಸಿಯುವ ಹಂತ ಮುಟ್ಟಿದ್ದು, ಪಾರಂಪರಿಕ ಆಡಳಿತ ಮೊಕ್ತೇಸರರು ರಾಜೀನಾಮೆ ನೀಡಿದ್ದು, ಆಡಳಿತಾಧಿಕಾರಿ ನೇಮಕವಾಗಿತ್ತು. ಇಂಥದೊಂದು ಸನ್ನಿವೇಶದಲ್ಲಿ ಗ್ರಾಮಸ್ಥರೆಲ್ಲ ಎದ್ದು ನಿಂತು ದೇವಳವನ್ನು ಮರು ನಿರ್ಮಿಸಿಯೇ ಸಿದ್ಧ ಎಂದು ಪ್ರತಿಜ್ಞೆ ಮಾಡಿದರು.
ಜೀರ್ಣೋದ್ಧಾರ ಸಮಿತಿ ರಚಿಸಿ ಆಡಳಿತಾಧಿಕಾರಿ ಮೂಲಕ ಇಲಾಖಾ ಅನುಮತಿ ಪಡೆದುಕೊಂಡರು. ಕೆಲವೇ ದಿನಗಳಲ್ಲಿ ಬಾಲಾಲಯ ನಿರ್ಮಾಣಗೊಂಡು ಹಳೆಯ ಮಂದಿರ ಕೆಡವಲಾಯಿತು. ಹೊಸ ದೇವಸ್ಥಾನಕ್ಕೆ ಪಾಯ ತೋಡಲಾಯಿತು. ಈ ಮಧ್ಯೆ, ಶಾಸ್ತ್ರೀಯ ವಾಸ್ತು ವಿಚಾರದಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ಸಮಯ ಕಾಮಗಾರಿ ಕುಂಠಿತಗೊಂಡಿತು.
ಕರಸೇವೆಯ ಕ್ರಾಂತಿ:
2.5 ಕೋಟಿ ರೂ. ವೆಚ್ಚದಲ್ಲಿ ಪುಟ್ಟದಾದ ಸುಂದರ ದೇಗುಲ ನಿರ್ಮಿಸಲಾಗಿದೆ. ಸರ್ವೆ, ಕೆದಂಬಾಡಿ, ಕೆಯ್ಯೂರು ಗ್ರಾಮಗಳ ಅರ್ಧರ್ಧ ಭಾಗ ದೇವಳ ವ್ಯಾಪ್ತಿಗೆ ಬರುತ್ತಿದ್ದು, 12,700 ಮಾನವ ದಿನಗಳ ಶ್ರಮದಾನ ನಡೆದಿದೆ. ಭಕ್ತರು ರಾತ್ರಿ ಹಗಲು ಕರಸೇವೆ ಮೂಲಕ ಬೆವರು ಸುರಿಸಿ ದೇಗುಲ ಕಟ್ಟಿದ್ದಾರೆ. ಗರ್ಭಗುಡಿ, ತೀರ್ಥ ಮಂಟಪ, ಸುತ್ತುಪೌಳಿ, ಮೆಟ್ಟಿಲು ಪೂರ್ಣಗೊಂಡಿದೆ. ಮಾಡಿಗೆ ತಾಮ್ರದ ಕವಚ ತೊಡಿಸಲಾಗಿದೆ. ನಾಗ ಸಾನಿಧ್ಯ ಪುನರುತ್ಥಾನಗೊಂಡು ಪ್ರತಿಷ್ಠೆ ಪೂರೈಸಿದೆ. ತಡೆಗೋಡೆ, ಇಂಟರ್‌ಲಾಕ್, ರಸ್ತೆ ಅಗಲೀಕರಣ ಸೇರಿದಂತೆ ಮೂಲಸೌಕರ್ಯಗಳಿಗಾಗಿ ಶಾಸಕ ಸಂಜೀವ ಮಠಂದೂರು ೬೫ ಲಕ್ಷ ರೂ. ಒದಗಿಸಿದ್ದಾರೆ.
ಫೆ.೧ ರಿಂದ ಒಂದು ವಾರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ. ೬೦ ವರ್ಷಗಳ ಹಿಂದೆ ಮುಜರಾಯಿ ಇಲಾಖೆಗೆ ಶತಮಾನಗಳ ಇತಿಹಾಸವಿರುವ ದೇಗುಲವಾಗಿದ್ದು, ಅಡಿಸ್ಥಳ ೧೪ ಸೆಂಟ್ಸ್, ದಾರಿ ೧೯ ಸೆಂಟ್ಸ್, ನಾಗಬನ ೫ ಸೆಂಟ್ಸ್ ಸ್ಥಳವಷ್ಟೇ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ ಸುಬ್ರಾಯ ಎಲಿಯತ್ತಾಯ ಆಡಳಿತ ಮೊಕ್ತೇಸರರಾಗಿದ್ದರು. ನಂತರ ಸುಬ್ರಾಯ ಮಡಂಬಡಿತ್ತಾಯ, ೧೯೫೩ರಲ್ಲಿ ವ್ಯಾಸರಾಮ್ ಮಡಂಬಡಿತ್ತಾಯ ಹುದ್ದೆ ಏರಿದರು. ೧೯೭೫ರಿಂದ ೨೦೧೯ವರೆಗೆ ನಾಗೇಶ್ ರಾವ್ ಸೇವೆ ಸಲ್ಲಿಸಿದರು. ೧೯೬೨ರಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿಸಲಾಯಿತು.
ಭಗೀರಥ ಪ್ರಯತ್ನಗಳ ಸರಣಿ:
೬೫ ವರ್ಷಗಳ ಹಿಂದೆ ದೇವಳದ ಜೀರ್ಣೋದ್ಧಾರ ನಡೆದಿತ್ತು ಎಂಬ ಐತಿಹ್ಯವಿದೆ. ೨೦೦೬-೦೭ರಲ್ಲಿ ಜೀರ್ಣೋದ್ಧಾರಕ್ಕೆ ಯತ್ನಿಸಲಾಗಿತ್ತು. ೨೦೧೮ರಲ್ಲಿ ಮತ್ತೊಮ್ಮೆ ಯತ್ನಿಸಲಾಯಿತು. ೩ನೇ ಪ್ರಯತ್ನ ೨೦೧೯ರಲ್ಲಿ ಆರಂಭಗೊಂಡು ೨೦೨೦ರಲ್ಲಿ ರೂಪ ಪಡೆದು, ೨೦೨೧ರಲ್ಲಿ ಅಧಿಕೃತ ಕಾರ್ಯ ಆರಂಭಗೊಂಡಿತು. ರಾಜಾರಾವ್ ಮುಡಂಬಡಿತ್ತಾಯ ಅಧ್ಯಕ್ಷತೆ, ಕೃಷ್ಣಕುಮಾರ್ ರೈ ಪ್ರ. ಕಾರ್ಯದರ್ಶಿಯಾಗಿ ಜೀರ್ಣೋದ್ಧಾರ ಸಮಿತಿ ಇದೆ. ಕರುಣಾಕರ ಗೌಡ ಎಲಿಯ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿ ಇದೆ. ಎಸ್. ನಾಗೇಶ್ ರಾವ್ ಅಧ್ಯಕ್ಷತೆ, ಬೂಡಿಯಾರ್ ರಾಧಾಕೃಷ್ಣ ರೈ ಕಾರ್ಯಾಧ್ಯಕ್ಷತೆ, ರವಿನಾರಾಯಣ ಭಟ್ ಎನ್. ಪ್ರ.ಕಾರ್ಯದರ್ಶಿ, ಪ್ರಸನ್ನ ರೈ ಮಜಲುಗದ್ದೆ ಕೋಶಾಧಿಕಾರಿಯಾಗಿರುವ ಬ್ರಹ್ಮಕಲಶೋತ್ಸವ ಸಮಿತಿ ರಚಿಸಲಾಗಿದೆ.