ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಹಂಚು ತೆಗೆದು ನಗ-ನಗದು ಹಾಗೂ ಅಂಗಳದಲ್ಲಿ ನಿಲ್ಲಿಸಿದ್ದ ದ್ವಿ ಚಕ್ರ ವಾಹನವನ್ನು ಕಳವುಗೈದ ಘಟನೆ ಉಜಿರೆ ಗ್ರಾಮದ ಕಕ್ಕೆಜಾಲು ಎಂಬಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಉಜಿರೆ ಗ್ರಾಮದ ಕಕ್ಕೆಜಾಲು ನಿವಾಸಿ ಸುಲೈಮಾನ್ ಎಂಬವರ ಮನೆಯಲ್ಲಿ ಕಳವುಗೈದಿದ್ದು, ಮುಂಡಾಜೆ ಗ್ರಾಮದ ಚಿನ್ನಿಗುಡ್ಡೆ ನಿವಾಸಿ ಇಂತಿಯಾಜ್(37) ಎಂಬವನನ್ನು ವಶಕ್ಕೆ ಪಡೆಯಲಾಗಿದೆ.
ಸುಲೈಮಾನ್ ಮತ್ತು ಮನೆಯವರು ಭದ್ರಾವತಿಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿ ಇಂತಿಯಾಜ್ ಮನೆಯ ಹಂಚನ್ನು ತೆಗೆದು ಗೋಡ್ರೇಜ್ ನಲ್ಲಿದ್ದ 60,000 ರೂ. ನಗದು, 1 ಗ್ರಾಂ ತೂಕದ 1 ಜೊತೆ ಕಿವಿಯೋಲೆ, 2, ಗ್ರಾಂ ತೂಕದ ಎರಡು ಉಂಗುರಗಳು, ನೋಕಿಯಾ ಮೊಬೈಲ್, ಹಾಗೂ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಕ್ಟಿವಾ 6ಜಿ ಸಮೇತ 1,35,100 ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ ಅಕ್ರ:07/2022 ಕಲಂ: 454, 457, 380, 379 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಹಾಗೂ ಆರೋಪಿಯಿಂದ 3,500 ರೂ., ಒಂದು ಜೊತೆ ಕಿವಿಯೋಲೆ, 2 ಸಣ್ಣ ಉಂಗುರ ಹಾಗೂ ಆಕ್ಟಿವಾವನ್ನು ಸ್ವಾಧೀನ ಪಡಿಸಿದ್ದು, ಸ್ವಾಧೀನ ಪಡಿಸಿದ ಸೊತ್ತುಗಳ ಮೌಲ್ಯ 78,000 ರೂ. ಆಗಿರುತ್ತದೆ ಎಂದು ತಿಳಿದು ಬಂದಿದೆ.